ಹುಬ್ಬಳ್ಳಿ: ಸಚಿವ ಡಿ.ಕೆ. ಶಿವಕುಮಾರ್ ಅವರು ಮೂಲತಃ ಕಾಂಗ್ರೆಸ್ಸಿಗರೇ ಆಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಿ ಅಧಿಕಾರಿಗಳ ಮೂಲಕ ತಮ್ಮ ಪಕ್ಷಕ್ಕೆ ಸೇರಿವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಅವರು ಸೇರಿ ಪಕ್ಷದ ಯಾವುದೇ ಸಚಿವರು, ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಸಚಿವರ ಮೇಲಿನ ಐಟಿ ದಾಳಿಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಕಾಂಗ್ರೆಸ್ ನವರು ಬಿಜೆಪಿ ಸೇರುವ ಭೀತಿ ನಮಗೆ ಇಲ್ಲವೇ ಇಲ್ಲ. ಬದಲಾಗಿ ಬಿಜೆಪಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಬಹುದು ಎನ್ನುವ ಆತಂಕ ಬಿಜೆಪಿಯವರನ್ನು ಕಾಡುತ್ತಿದೆ.
ಸಾಕಷ್ಟು ಮಂದಿ ಬಿಜೆಪಿ ಮುಖಂಡರು ನಮ್ಮ ಜತೆ ಸಂಪರ್ಕದಲ್ಲೂ ಇದ್ದಾರೆ. ಆದರೆ, ಆರ್'ಎಸ್ಎಸ್ ಮೂಲದವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವುದಿಲ್ಲ. ಏಕೆಂದರೆ, ಆರ್'ಎಸ್ಎಸ್ ಮೂಲದವರು ಕೋಮುವಾದಿಗಳು. ಬಿಜೆಪಿಯಿಂದ ಕಾಂಗ್ರೆಸ್ ಗೆ ಬರಲಿಚ್ಛಿಸುವವರ ಹಿನ್ನಲೆ ತಿಳಿದುಕೊಂಡ ಬಳಿಕವಷ್ಟೇ ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ. ಯಾರು ಯಾರನ್ನೋ ಪಕ್ಷಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಳಿಕ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಬಿಜೆಪಿಯವರು ಕಪಟಿಗರು. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಟಿಪ್ಪುವಿನಂತೆಯೇ ವೇಷ ಧರಿಸಿದ್ದರು. ಇದೀಗ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಜನರಿಂದ ಮತ ಪಡೆಯುವ ಸಲುವಾಗಿ ಬಿಜೆಪಿ ನಾಯಕರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಕುರಿತಂತೆ ಟೀಕೆ ಮಾಡುವ ನೈತಿಕ ಹಕ್ಕು ಅವರಿಗಿಲ್ಲ. ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿದ್ದ ಬಿಜೆಪಿ ನಾಯಕರ ಹೆಸರುಗಳನ್ನು ತೆಗೆದು ಹಾಕಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics