ರಾಜಕೀಯ

ಡಿ.19ರಂದು ವರ್ತೂರ್ ಪ್ರಕಾಶ್ ರಿಂದ 'ನಮ್ಮ ಕಾಂಗ್ರೆಸ್' ಪಕ್ಷ ಘೋಷಣೆ

Lingaraj Badiger
ಕೋಲಾರ: ಡಿಸೆಂಬರ್ 19ರಂದು ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ಮಾಜಿ ಸಚಿವ ಹಾಗೂ ಹಾಲಿ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್ ಅವರು, ಹೊಸ ರಾಜಕೀಯ ಪಕ್ಷ ರಚನೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಿರ್ಧಾರ ತೆಗೆದುಕೊಂಡಿದ್ದು, ಡಿಸೆಂಬರ್ 19ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ 'ನಮ್ಮ ಕಾಂಗ್ರೆಸ್' ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಸಮಾವೇಶದಲ್ಲಿ ಸುಮಾರು ಮೂರು ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಹೊಸ ಪಕ್ಷ ಘೋಷಣೆಗೆ ಕೂಡಲಸಂಗಮವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್, ಅದು ಬಸವಣ್ಣನವರ ಜನ್ಮ ಸ್ಥಳ. ಹೀಗಾಗಿ ಅದನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ನನ್ನ ರಾಜಕೀಯ ಪಕ್ಷಕ್ಕೆ 'ನಮ್ಮ ಕಾಂಗ್ರೆಸ್' ಎಂದು ಹೆಸರಿಡಲು ನಿರ್ಧರಿಸಿದ್ದು, ಇದು ಅಹಿಂದ ಸಿದ್ಧಾಂತಗಳನ್ನು ಒಳಗೊಂಡಿರುತ್ತದೆ ಎಂದು ಕುರುಬ ಸಮುದಾಯದ ಪ್ರಮುಖ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವರ್ತೂರ್ ಪ್ರಕಾಶ್ ಅವರು ತಿಳಿಸಿದ್ದಾರೆ.
ಮುಂದಿನ ವಿಧಾನಸಭೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ಹೊಸ ಪಕ್ಷ ಸ್ಪರ್ಧಿಸಲಿದೆಯೇ? ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್, ಸಮಾವೇಶದ ನಂತರ ಆ ಬಗ್ಗೆ ನಿರ್ಧರಿಸಲಾಗುವುದು. ಆದರೆ ಕೆಲವು ಪ್ರಮುಖ ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದಾರೆ ಎಂದಿದ್ದಾರೆ.
ಡಿಸೆಂಬರ್ 19 ವರ್ತೂರ್ ಪ್ರಕಾಶ್ ಅವರ ಜನ್ಮ ದಿನವಾಗಿದ್ದು, ಅಂದೇ ಹೊಸ ಪಕ್ಷ ಘೋಷಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT