ಮಂಡ್ಯ: ಬಿಜೆಪಿ ನಾಯಕರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಬುದ್ಧಿ ಇಲ್ಲ. ಕೆ.ಎಸ್. ಈಶ್ವರಪ್ಪ ಬುದ್ಧಿ ಹೀನ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಜೈಲಿಗೆ ಹೋಗಿ ಬಂದ ಗಿರಾಕಿ ನನ್ನನ್ನು ಕಮಿಷನ್ ಏಜೆಂಟ್ ಅಂದಿದ್ದಾರೆ. ಅಷ್ಟು ಕೀಳಾಗಿ ನಾನು ಮಾತನಾಡಲಾರೆ. ದಾಖಲೆ ಸಮೇತ ನಾನು ಮಾಡಿರುವ ಭ್ರಷ್ಟಚಾರ ತೋರಿಸಿದರೆ ಸಾರ್ವಜನಿಕ ಜೀವನದಲ್ಲೇ ಉಳಿಯುವುದಿಲ್ಲ' ಎಂದು ಮಾಜಿ ಸಿಎಂ ಬಿಎಸ್ ವೈಗೆ ಸವಾಲು ಹಾಕಿದರು.
ಬಿಜೆಪಿಯವರು ನನ್ನ ವಿರುದ್ಧ ಹೀಗೆ ಮಾತನಾಡುವುದು ಯಾಕೆ ಗೊತ್ತಾ? ಅವರಿಗೆ ನನ್ನನ್ನು ಕಂಡರೆ ಹೊಟ್ಟೆ ಕಿಚ್ಚು. ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಅಂತ. ಅವರ ಹೊಟ್ಟೆ ಕಿಚ್ಚು ಅವರನ್ನೇ ಸುಡುತ್ತದೆ. ನನಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ ಎಂದರು.
ಇದೇ ವೇಳೆ ತಾವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿಯಾಗಿದ್ದು, ಜೆಡಿಎಸ್‌ನಲ್ಲೇ ಇದ್ದರೆ ಮುಖ್ಯಮಂತ್ರಿಯಾಗಲು ಬಿಡುತ್ತಿರಲಿಲ್ಲ ಎಂದು ಜೆಡಿಎಸ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ನಾಗಮಂಗಲ ಜನತೆ ನಾನೂ ಬಂದಾಗಲೆಲ್ಲಾ ಪ್ರೀತಿಯಿಂದ ಕಂಡಿದ್ದು, ತಾಲ್ಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. 1999, 2004ರಲ್ಲಿ ನಾನು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ತಪ್ಪಿಸಿದರು. ಜೆಡಿಎಸ್‌ನಲ್ಲಿ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಸೋನಿಯಾ ಗಾಂಧಿ ಹಾಗೂ ಜನರಿಂದ ನಾನು ಮುಖ್ಯಮಂತ್ರಿ ಆದೆ' ಎಂದರು.
ನಾಗಮಂಗಲದ ಕನಕ ಭವನಕ್ಕೆ ಒಂದುವರೆ ಕೋಟಿ ರುಪಾಯಿ ಅನುಧಾನ ಘೋಷಣೆ ಮಾಡಿದ ಸಿಎಂ, ಉತ್ತಮ ಮಟ್ಟದಲ್ಲಿ ಕನಕ ಭವನ ನಿರ್ಮಿಸುವಂತೆ ಸೂಚಿಸಿದರು. ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನವರಿ 1 ರಿಂದ ಒಟ್ಟು 500 ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವುದಾಗಿ ಸಿಎಂ ಭರವಸೆ ನೀಡಿದರು.