ಹುಬ್ಬಳ್ಳಿ: ಕೇಂದ್ರ ಸರ್ಕಾರ ಕಡಿಮೆ ದರಕ್ಕೆ ವಿದ್ಯುತ್ ನೀಡುವುದಾದರೆ ಇತರೆ ಎಲ್ಲಾ ವಿದ್ಯುತ್ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿಸುವುದಾಗಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ 2 ರು. 50 ಪೈಸೆಗೆ ಯೂನಿಟ್‌ನಂತೆ ವಿದ್ಯುತ್ ಪೂರೈಸಲು ಸಿದ್ಧವಿದ್ದರೂ ರಾಜ್ಯ ಸರ್ಕಾರ ಹೆಚ್ಚು ಹಣ ಪಾವತಿಸಿ ಜಿಂದಾಲ್ ಹಾಗೂ ಯುಪಿಸಿಎಲ್‌ನಿಂದ ವಿದ್ಯುತ್ ಖರೀದಿಸುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿಂದ ಡಿ.ಕೆ. ಶಿವಕುಮಾರ್ ಅವರು, ಅಷ್ಟು ಕಡಿಮೆ ದರದಲ್ಲಿ ವಿದ್ಯುತ್ ದೊರೆಯುತ್ತದೆ ಎಂಬುದಾದರೆ ಬೇರೆಡೆ ಖರೀದಿಸುವ ಒಪ್ಪಂದಗಳನ್ನು ರದ್ದು ಮಾಡುತ್ತೇವೆ. ಬೇಕಿದ್ದರೆ ಯಡಿಯೂರಪ್ಪ ಅವರು ಹೇಳಿದ ದಿನಾಂಕದಂದು ನಾವು ಒಪ್ಪಂದ ಮಾಡಿಕೊಳ್ಳಲು ತಯಾರಿದ್ದೇವೆ. ಅಲ್ಲದೆ ಕೇಂದ್ರ ಸಚಿವ ಅನಂತಕುಮಾರ್ ಅವರೂ ನಿಯೋಗದ ನೇತೃತ್ವ ವಹಿಸಲಿ ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಒಪ್ಪಿಗೆ ಪಡೆದೇ ಸದ್ಯ ಪ್ರತಿ ಯೂನಿಟ್‌ಗೆ 5.08 ಪೈಸೆಯಂತೆ ವಿದ್ಯುತ್ ಖರೀದಿಸುತ್ತಿದ್ದೇವೆ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಶೇ. 27ರಷ್ಟು ಹಾಗೂ ರಾಯಚೂರು ಸ್ಥಾವರಕ್ಕೆ ಶೇ. 48ರಷ್ಟು ಕಲ್ಲಿದ್ದಲು ಕೊರತೆ ಇದೆ. ಆದರೂ ಈ ಬಾರಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.