ಕಲಬುರ್ಗಿ: ಒಂದು ವೇಳೆ ಕಾಂಗ್ರೆಸ್ ದೇಶ ಮಾರಿದ್ದರೆ ಮೋದಿ ಪ್ರಧಾನಿ ಆಗುತ್ತಿದ್ದರಾ?, ರಾಕೆಟ್, ಉಪಗ್ರಹಗಳನ್ನು ಉಡಾಯಿಸುತ್ತಿದ್ದರಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರ ‘ನಾನು ಚಹಾ ಮಾರಿದ್ದೇನೆ ಹೊರತು ದೇಶವನ್ನಲ್ಲ’ಎಂಬ ಹೇಳಿಕೆಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಬುಧವಾರ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ಚಹಾ ಮಾರಿದ್ದೇನೆ ಎಂಬ ಮಾತನ್ನು ಇನ್ನೂ ಎಷ್ಟು ದಿನ ಹೇಳುತ್ತಾ ಓಡಾಡುತ್ತಾರೆ. ಜನರ ಅನುಕಂಪ ಗಳಿಸಲು ಅವರು ಈ ಮಾತು ಹೇಳುತ್ತಿರುತ್ತಾರೆ. ಹಾಗಾದರೆ, ಕಾಂಗ್ರೆಸ್ ದೇಶವನ್ನು ಮಾರಿದೆಯಾ? ಒಂದು ವೇಳೆ ನಾವು ದೇಶ ಮಾರಿದ್ದರೆ ಮೋದಿ ಪ್ರಧಾನಿ ಆಗುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಮೋದಿ ಅವರು ನಿರ್ಧಾರಗಳಿಂದ ಗುಜರಾತ್ ಜನತೆ ಬೇಸತ್ತಿದ್ದು, ಮೋದಿ ವರ್ಚಸ್ಸು ಕಡಿಮೆ ಆಗಿದೆ. ಗುಜರಾತ್‌ನಲ್ಲಿ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಗುಜರಾತಿನವರೇ ಪ್ರಧಾನಿ ಆಗುತ್ತಾರೆ ಎಂಬ ಕಾರಣಕ್ಕೆ ಅಲ್ಲಿನ ಜನರು ಮೋದಿಯನ್ನು ಬೆಂಬಲಿಸಿದ್ದರು. ಆದರೆ, ಮೋದಿ ಕೈಗೊಂಡ ಕೆಲವು ನಿರ್ಣಯಗಳಿಂದ ಅವರು ಬೇಸತ್ತು ಹೋಗಿದ್ದಾರೆ. ಗುಜರಾತಿನಲ್ಲಿ ಈ ಭಾರಿ ಕಾಂಗ್ರೆಸ್ ಅಲೆಯಿದ್ದು, ಗೆಲುವು ಸಾಧಿಸುವುದು ಖಚಿತ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮೋದಿಯ ತಪ್ಪು ನಿರ್ಣಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಬಿಜೆಪಿಗೆ ಕಠಿಣ ಸವಾಲು ಒಡ್ಡಲು ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದರು.
ಮೋದಿ ಸರ್ವಾಧಿಕಾರಿಯಂತೆ ಇಡೀ ದೇಶವನ್ನು ನಡೆಸಬೇಕು ಎಂದು ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಅವರದೇ ಪಕ್ಷದಲ್ಲಿ ವಿರೋಧವಿದೆ ಎಂದು ಖರ್ಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics