ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ಅಧಿಕಾರಕ್ಕೆ ಬಂದರೇ ತಾವೇ ಮುಖ್ಯಮಂತ್ರಿಯಾಗುವುದಾಗಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ತಾಳ್ಮೆ ಕಳೆದುಕೊಂಡು ಸಿಡಿಮಿಡಿಗೊಂಡರು.
ಮುಂದಿನ ವಿಧಾನ ಸಭೆ ನಂತರ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಶ್ರದ ಹೈ ಕಮಾಂಡ್ ನಿರ್ಧರಿಸುತ್ತದೆ, ಮತ್ತೆ ಮತ್ತೆ ಈ ಪ್ರಶ್ನೆಯನ್ನು ಕೇಳಬೇಡಿ, ಇದನ್ನು ಇಲ್ಲಿಗೆ ಅಂತ್ಯಗೊಳಿಸಿ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಘೋಷಿಸಿದೆ, ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಿರ್ಧರಿಸುತ್ತಾರೆ, ಮತ್ತೆ ಮತ್ತೆ ಈ ಪ್ರಶ್ನೆ ಕೇಳುವ ಮೂಲಕ ಗೊಂದಲ ಹಾಗೂ ವಿವಾದ ಸೃಷ್ಟಿಸಬೇಡಿ ಎಂದು ಕಿರಿಕಿರಿಯಿಂದ ಪರಮೇಶ್ವರ್ ನುಡಿದರು. ಹೈ ಕಮಾಂಡ್ ಬಯಸಿದರೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ದಸರಾ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ ಮುಂದಿನ ವರ್ಷವು ತಾವೇ ನಂದಿ ದ್ವಜಕ್ಕೆ ಪೂಜೆ ಸಲ್ಲಿಸುವುದಾಗಿ ಹೇಳಿದ್ದರು., ಈ ಮೂಲಕ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದರೇ ಮುಂದಿನ ಸಿಎಂ ತಾವೇ ಎಂಬ ಪರೋಕ್ಷ ಸಂದೇಶ ನೀಡಿದ್ದರು, ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್, ಮುಂದಿನ ಸಿಎಂ ಯಾರು ಎಂಬುದನ್ನು ಹೈ ಕಮಾಂಡ್ ನಿರ್ಧರಿಸಲಿದೆ, ಆದರೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ತಾವೇ ನಿರ್ಧರಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.