ಬೆಂಗಳೂರು: ಇತ್ತ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿ ಯೋಜನೆ ಕುರಿತ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಶೋಭಾ ಕರಂದ್ಲಾಜೆ ಅವರು, ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸುವ ಯೋಜನೆ ಸಿದ್ದರಾಮಯ್ಯ ಸರ್ಕಾರದ ಭಂಡತನಕ್ಕೆ ಹಿಡಿದ ಸಾಕ್ಷಿ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಮೊದಲಿನಿಂದಲೂ ಕೇಂದ್ರದ ಎನ್ ಡಿಎ ಸರ್ಕಾರದ ಮೇಲೆ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದು, ಈ ಪ್ರಕರಣ ಅದನ್ನು ಪುಷ್ಟೀಕರಿಸಿದೆ. ಇಷ್ಟಕ್ಕೂ ಐಟಿ ಆಧಿಕಾರಿಗಳು ಅವರ ಕರ್ತವ್ಯ ಪಾಲನೆ ಮಾಡಿದ್ದು, ಭ್ರಷ್ಟವ್ಯಕ್ತಿಗಳ ಮುಖವಾಡ ಬಯಲು ಮಾಡಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ದೂರುಗಳು ಬಂದಿದ್ದರೆ, ಅದನ್ನು ಐಟಿ ಇಲಾಖೆಯ ಮುಖ್ಯಸ್ಥರಿಗೆ ಅಥವಾ ಕೇಂದ್ರ ಸರ್ಕಾರದ ಗಮನಕ್ಕೆ ತಂದು ದೂರು ನೀಡಲಿ. ಅದನ್ನು ಬಿಟ್ಟು ಎಸಿಬಿ ಮೂಲಕ ಐಟಿ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಧಿಕಾರ ಎಸಿಬಿಗೂ ಇಲ್ಲ..ರಾಜ್ಯ ಸರ್ಕಾರಕ್ಕೂ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪನ್ನು ಮರೆಮಾಚಲು ಎಸಿಬಿಯನ್ನು ಈ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಗೋಮುಖ ವ್ಯಾಘ್ರತನವನ್ನು ರಾಜ್ಯದ ಪ್ರಜೆಗಳಿಗೆ ಪರಿಚಯಿಸಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಸಿಬಿ ಮೂಲಕ ಐಟಿ ಅಧಿಕಾರಿಗಳನ್ನು ಹೆದರಿಸುವ ಕಾರ್ಯ ನಡೆದಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics