ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಜಿ. ಪರಮೇಶ್ವರ್, ಸಿದ್ದರಾಮಯ್ಯ ಮತ್ತು ವೇಣುಗೋಪಾಲ್
ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಆರಂಭಿಸಿದ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಪರಿಣಾಮಕಾರಿಯಾಗಿ ನಡೆಯದಿರುವುದು ವೇಣುಗೋಪಾಲ್ ಕೋಪಕ್ಕೆ ಕಾರಣವಾಗಿದೆ.
ಪಕ್ಷದ ಶಾಸಕರು ಅಭಿಯಾನದಲ್ಲಿ ಕೈ ಜೋಡಿಸುತ್ತಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಅವರು ತೀವ್ರ ಅಸಮಾಧಾನ ಗೊಂಡಿದ್ದರು.
ಸೆಪ್ಟಂಬರ್ 23 ರಿಂದ ಆರಂಭವಾಗಿರುಮ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬುದು ಕೋಪಕ್ಕೆ ಕಾರಣವಾಗಿದೆ. ಮನೆ ಮನೆಗೆ ಕಾಂಗ್ರೆಸ್ ಯೋಜನೆಯನ್ನು ಹದಿನೈದು ದಿನ ವಿಸ್ತರಿಸಲಾಗಿದೆ. ಅ.15ಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಿದ ಕಾರ್ಯಕ್ರಮವನ್ನು ಅಕ್ಟೋಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ
ಜೊತೆಗೆ ಜನರೊಂದಿಗೆ ಕನೆಕ್ಟ್ ಆಗಲು ಹಾಗೇ ಪ್ರಾಪಂಚಿಕ ಜ್ಞಾನವನ್ನು ಕ್ಷಣ ಮಾತ್ರದಲ್ಲಿ ತಿಳಿಯಲು ಸಹಾಯಕವಾಗಿರುವ ಸೋಸಿಯಸ್ ಮೀಡಿಯಾ ಬಳಸದವರಿಗೆ ವೇಣುಗೋಪಾಲ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜನಮಾನಸದಲ್ಲಿ ಬೇರು ಬಿಟ್ಟಿರುವ ಸೋಶಿಯಲ್ ಮೀಡಿಯಾವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವರಿಗೆ ಅವರು ಸೂಚನೆ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿಲ್ಲದವರತ್ತ ಚಾಟಿಯನ್ನೂ ಬೀಸಿದರು
10 ಸಚಿವರು ಹಾಗೂ 40 ಶಾಸಕರು ಇನ್ನೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅಕೌಂಟ್ ಕ್ರಿಯೇಟ್ ಮಾಡದಿರುವುದಕ್ಕೆ ಗರಂ ಆದ ವೇಣುಗೋಪಾಲ್ ಹೇಗೆ ಕೂಡಲೇ ಖಾತೆ ತೆರೆಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಶಾಸಕಾಂಗ ಸಭೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರದವರ ಲಿಸ್ಟ್ ಓದಿದರು. ಈ ವೇಳೆ ಕೆಲ ಸಚಿವರು ನಮಗೆ ಕಂಪ್ಯೂಟರ್ ಜ್ಞಾನ ಇಲ್ಲ ಅಂತ ಸಮರ್ಥನೆ ಮಾಡಿಕೊಂಡರು. ಸಚಿವರ ಸಮರ್ಥನೆಗೆ ವೇಣುಗೋಪಾಲ್ ಗರಂ ಆಗಿಯೇ ಪ್ರತಿಕ್ರಿಯಿಸಿದರು.
ನಿಮಗೆ ಕಂಪ್ಯೂಟರ್ ಜ್ಞಾನ ಇಲ್ಲ ಅಂದ್ರೆ ಒಬ್ಬರನ್ನ ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಸಚಿವರೇ ಸಾಮಾಜಿಕ ಜಾಲ ಬಳಸದಿದ್ದರೆ ಹೇಗೆ ಎಂದು ಉಮಾಶ್ರೀ ಹೆಸರು ಹೇಳಿ ಕುಟುಕಿದ ವೇಣುಗೋಪಾಲ್, ಆಧುನಿಕ ಮಾಧ್ಯಮವನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಪಕ್ಷದ ಕಾರ್ಯಕ್ರಮ ಮತ್ತು ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಚುರುಕುಗೊಳಿಸಬೇಕು. ಇನ್ನು ಮುಂದೆ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಕ್ಷದ ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಜತೆಗೆ ಪಕ್ಷದ ಕಾರ್ಯಕ್ರಮಗಳಿಗೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ವೇಣುಗೋಪಾಲ್ ಸೂಚಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.