ಬೆಂಗಳೂರು: ಜೆಡಿಎಸ್‌ನಲ್ಲಿ "ಸೂಟ್‌ಕೇಸ್ ಸಂಸ್ಕೃತಿ' ಇದೇ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಬಕೆಟ್ ರಾಜಕೀಯದಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಅಕ್ಟೋಬರ್ 10 ರಂದು ರಾಜರಾಜೇಶ್ವರಿ ನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ಕ್ಷೇತ್ರದಲ್ಲಿ ನಾನು ರಾಜಕೀಯವಾಗಿ ಬೆಳೆದು ಬಿಡುತ್ತೇನೆ ಎಂಬ ಕಾರಣದಿಂದ ಕೆಲವು ಬಕೆಟ್ ಕಳ್ಳರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ನನ್ನ ಹೇಳಿಕೆ ತಿರುಚಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಾನು ಬೆಳೆದರೆ ಅವರ ಕಳ್ಳಾಟ ತಡೀತೀನಿ ಅನ್ನೋ ಭಯ ಕೆಲವರಿಗಿದೆ. ಹೀಗಾಗಿ ವ್ಯವಸ್ಥಿತವಾಗಿ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ, ನನ್ನ 7 ವರ್ಷಗಳ ಕಠಿಣ ಶ್ರಮ ಕೇವಲ ಒಬ್ಬ ವ್ಯಕ್ತಿಯಿಂದ ಹೀಗೆ ಒಂದೇ ದಿನದಲ್ಲಿ ನಾಶವಾದದ್ದು ನನಗೆ ತುಂಬಾ ನೋವು ತಂದಿದೆ ಎಂದು ನೊಂದು ನುಡಿದಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸಂದೇಶ ರವಾನಿಸಿದ ಅವರು ರಾಜರಾಜೇಶ್ವರಿ ತಾಯಿ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಈ ತಾಯಿಯ ಶಕ್ತಿಯ ಭರವಸೆ ನನಗೂ ಇದೆ ಎಂದು ಹೇಳಿದರು.
ತಮ್ಮ ತಾತ ದೇವೇಗೌಡ ಮತ್ತು ಚಿಕ್ಕಪ್ಪ ಕುಮಾರಸ್ವಾಮಿ ಪಕ್ಷದ ಪ್ರಮುಖ ಪಿಲ್ಲರ್ ಗಳಾಗಿದ್ದಾರೆ, ಅವರ ವಿರುದ್ಧವಾಗಿ ಹೋಗಲು ನಾನು ಸ್ಟುಪಿಡ್ ಅಲ್ಲ ಎಂದು ಹೇಳಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಹುಣಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಜ್ವಲ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಪ್ರವೇಶಿಸಿ ವಿವಾದವನ್ನು ತಣ್ಣಗಾಗಿಸಿದ್ದರು. ಹುಣಸೂರು ಕ್ಷೇತ್ರದಲ್ಲಿ ಎಚ್.ವಿಶ್ವನಾಥ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತು. ಹೀಗಾಗಿ ಪ್ರಜ್ವಲ್ ಗೆ ಹುಣಸೂರಿನ ಟಿಕೆಟ್ ನಿರಾಕರಿಸಿದ ನಂತರ ಬೇಸರಗೊಂಡು ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics