ರಾಜಕೀಯ

ಜನರಿಗೆ ಗುಂಡಿಬಿದ್ದ ರಸ್ತೆಗಳು,ಶಾಸಕರಿಗೆ ಚಿನ್ನದ ಬಿಸ್ಕೆಟ್?: ಸಾರ್ವಜನಿಕರ ವ್ಯಾಪಕ ಆಕ್ರೋಶ

Shilpa D
ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ಎಲ್ಲಾ ಶಾಸಕರಿಗೆ ಹಾಗೂ ಎಂಎಲ್ ಸಿಗಳಿಗೆ ಚಿನ್ನದ ಬಿಸ್ಕೆಟ್ ಮತ್ತು ಬೆಳ್ಳಿ ತಟ್ಟೆ ನೀಡುವ ಪ್ರಸ್ತಾಪಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಷಯವನ್ನು ಕೈ ಬಿಡಲಾಗಿದೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು ಜನತೆ ನಲುಗಿ ಹೋಗಿದ್ದು, ರಸ್ತೆಗಳ ಗುಂಡಿಗಳಿಂದ  ಹಾಗೂ ಮಳೆಯಿಂದಾದ ಅನಾಹುತಗಳಿಂದ ಹಲವರು ಪ್ರಾಣ ಕಳೆದು ಕೊಂಡಿದ್ದಾರೆ, ರಾಜ್ಯ ರಾಜಧಾನಿಗೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸುವುದನ್ನು ಬಿಟ್ಟು ಸರ್ಕಾರ ಶಾಸಕರಿಗೆ ಚಿನ್ನದ ಬಿಸ್ಕೆಟ್ ನೀಡಲು ಮುಂದಾಗಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ  ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಧನಾಸಭೆ ಚುನಾವಣೆ ಸಮೀಪವಾಗುತ್ತಿರುವ ಹೊತ್ತಲ್ಲೇ ಸರ್ಕಾರದ ಚಿನ್ನದ ಬಿಸ್ಕೆಟ್ ನಿರ್ಧಾರ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಕಾರಣದಿಂದ ಪ್ರಸ್ತಾವನೆಯಿಂದ ಹಿಂದೆ ಸರಿಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
ಅಕ್ಟೋಬರ್ 25 ಮತ್ತು 26 ರಂದು ನಡೆಯು ಕಾರ್ಯಕ್ರಮದ ಅಂಗವಾಗಿ ಪ್ರತಿಯೊಬ್ಬ ಶಾಸಕನಿಗೆ ರು. 50 ಸಾವಿರ ವೆಚ್ಚದಲ್ಲಿ ಉಡುಗೊರೆ ನೀಡಲು ನಿರ್ಧರಿಸಲಾಗಿತ್ತು. ಕೇವಲ ಶಾಸಕರಿಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಚಿನ್ನದ ಬಿಸ್ಕೆಟ್ ನೀಡಲು ಸಚಿವಾಲಯ ಪ್ರಸ್ತಾಪ ಮುಂದಿಟ್ಟಿತು. ಇದಕ್ಕಾಗಿ ಹಣಕಾಸು ಇಲಾಖೆಗೆ 26 ಕೋಟಿ ರು. ಙಮ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಪ್ರಸ್ತಾವನೆ ಆಡಳಿತ ಮತ್ತು ವಿಪಕ್ಷದ ಹಲವು ಸದಸ್ಯರಿಗೆ ಸಮ್ಮತವಾಗಿರಲಿಲ್ಲ, ಎಂಎಲ್ ಎ ಮತ್ತು ಎಂಎಲ್ ಸಿಗಳಿಗೆ ಚಿನ್ನದ ಬಿಸ್ಕೆಟ್ ಮತ್ತು ಬೆಳ್ಳಿ ತಟ್ಟೆ ನೀಡುವ ಸಂಬಂಧ ಹಣಕಾಸು ಇಲಾಖೆಗೆ ಯಾವುದೇ ಪ್ರಸ್ತಾವನೆ ಕಳುಹಿಸಲಾಗಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಹೇಳಿದ್ದಾರೆ. ಇನ್ನೂ ಶಾಸಕರಿಗೆ ಸ್ಮರಣಿಕೆ ನೀಡುವ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸೌಧದ ಲಾಂಛನವುಳ್ಳ ಮರದ ಮೆಮೆಂಟೋ ನೀಡಲಾಗುವುದು ಎಂದು ಹೇಳಿದ್ದಾರೆ.
ವೆಚ್ಚದ ಅಂದಾಜುಗಳನ್ನು ಮಾತ್ರ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ, ಆದರೆ ಅದಕ್ಕೆ ಇನ್ನೂ  ಅನುಮೋದನೆ ಸಿಕ್ಕಿಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಿಂದ ಅನಾಹುತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರುಗಳು ಸಂಭ್ರಮಾಚರಣೆ ವೆಚ್ಚ ಕಡಿತಗೊಳಿಸುವಂತೆ ಸಲಹೆ ನೀಡಿದ್ದಾರೆ.
ವಜ್ರ ಮಹೋತ್ಸವ ಆತರಣೆ ಮಾಡುವುದರಲ್ಲಿ ತಪ್ಪಿಲ್ಲ, ಆದರೆ ದುಬಾರಿ  ಉಡುಗೊರೆ ನೀಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ,  ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಹೀಗಿರುವಾಗ ವಜ್ರ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ,ಆರ್ ಸೀತಾರಾಂ ಸಲಹೆ ನೀಡಿದ್ದಾರೆ. ಶಾಸಕಾಂಗ ಸಚಿವಾಲಯ ನಿರ್ಧಾರ ಕೈಗೊಳ್ಳುವ ಮೊದಲು ಸರ್ಕಾರದ ಜೊತೆ ಚರ್ಚಿಸಬೇಕಿತ್ತು ಎಂದು ಹಲವು ಎಂಎಲ್ ಸಿಗಳು ಹೇಳಿದ್ದಾರೆ. ಸಿಎಂ ಸಲಹೆಯ ನಂತರ ಅಂದಾಜು ವೆಚ್ಚ 10 ಕೋಟಿಗೆ ಇಳಿಸುವ ಸಾಧ್ಯತೆಯಿದೆ.
SCROLL FOR NEXT