ರಾಜಕೀಯ

ಅಸಮಾಧಾನಗೊಂಡ ನಾಯಕರ ಪಕ್ಷಾಂತರ ಪರ್ವ: ಅಂಬರೀಷ್ ಮನವೊಲಿಕೆಗೆ ಸಿಎಂ ಯತ್ನ?

Shilpa D
ಬೆಂಗಳೂರು: ಆರು ಬಾರಿ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಹಾಗೂ ದೇವರ ಹಿಪ್ಪರಗಿ ಶಾಸಕ ಎಸ್. ಪಾಟೀಲ್ ನಡಹಳ್ಳಿ ಕಾಂಗ್ರೆಸ್ ತೊರೆದು ಬಿಡಜೆಪಿ ಸೇರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. 
ಅಸಮಾಧಾನಗೊಂಡಿರುವ ನಾಯಕರು ಪಕ್ಷ ತೊರೆಯದಂತೆ ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಿದೆ.
ಮಂಡ್ಯ ಭಾಗದ ಪ್ರಬಲ ಒಕ್ಕಲಿಗ ನಾಯಕನಾಗಿರುವ ಚಿತ್ರನಟ ಹಾಗೂ ಶಾಸಕ ಅಂಬರೀಷ್ ಪಕ್ಷ ತಮ್ಮನ್ನು ನಿರ್ಲಕ್ಷ್ಯಿಸಿದೆ ಎಂದು ದೂರಿದ್ದಾರೆ. ಮಂಡ್ಯ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಅಂಬರೀಷ್ ಅವರ ಅಳಲಾಗಿದೆ. ನಾನು ಟಿಕೆಟ್ ಗಾಗಿ  ಅರ್ಜಿ ಸಲ್ಲಿಸುವುದಿಲ್ಲ, ನನಗೆ ಟಿಕೆಟ್ ನೀಡಿದರೇ ಸ್ಪರ್ದಿಸುತ್ತೇನೆ ಇಲ್ಲದಿದ್ದರೇ, ನನಗೇನು ತೊಂದರೆಯಿಲ್ಲ, ನನ್ನ ಆರೋಗ್ಯ ನನಗೆ ಮುಖ್ಯ, ನನಗೆ ಟಿಕೆಟ್ ಬೇಕಾಗಿಲ್ಲ ಎಂದು ಕಡ್ಡಿ ತುಂಡರಿಸಿದಂತೆ ಮಾತನಾಡಿದ್ದಾರೆ.
ಒಂದು ವೇಳೆ ಅಂಬರೀಷ್ ಗೆ ಟಿಕೆಟ್ ನೀಡಿದರೇ ಮಂಡ್ಯ ಕಾಂಗ್ರೆಸ್ ಇಬ್ಬಾಗವಾಗುತ್ತದೆ ಎಂಬ ಚಿಂತೆ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಪಕ್ಷದ ಚಟುವಟಿಕೆಗಳಿಂದ ದೂರ ಇರುವ ಅಂಬರೀಷ್ ರಿಗೆ ಟಿಕೆಟ್ ನೀಡುವುದನ್ನು ಒಂದು ಗುಂಪು ಪ್ರಬಲವಾಗಿ ವಿರೋಧಿಸಿದೆ. ಆದರೆ ಮತ್ತೊಂದೆಡೆ ಬೆಂಗಳೂರಿನಲ್ಲಿರುವ ಅಂಬರೀಷ್ ಅವರ ಮನೆಗೆ ತೆರಳಿದ್ದ ನಿಯೋಗವೊಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಬೇಕು ಬೇರೆ ಯಾವುದೇ ಅಭ್ಯರ್ಥಿಯನ್ನ ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಅಂಬರೀಷ್ ಅವರಲ್ಲಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ ಕೂಡ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಹೀಗಾಗಿ  ಪಕ್ಷದ ಹಿರಿಯ ಮುಖಂಡರು ಮಂಡ್ಯ ಕಾಂಗ್ರೆಸ್ ಒಳಜಗಳ ಬಗೆಹರಿಸಲು ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಅಂಬರೀಷ್  ಅವರನ್ನು ಬೇಟಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಷ್ಟು ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲಿಯೂ ಕೂಡ ಅಸಮಾಧಾನಗೊಂಡಿರುವ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಆರು ಬಾರಿ  ಅಪ್ಝಲಪುರ ಕ್ಷೇತ್ರದ ಶಾಸಕರಾಗಿರುಪ ಮಾಲೀಕಯ್ಯ ಗುತ್ತೇದಾರ್ ಖರ್ಗೆ ವಿರುದ್ಧ ಸಮರ ಸಾರಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 
ಇನ್ನೂ ಆರು ಬಾರಿ ಶಾಸಕರಾಗಿದ್ದರೂ ಸಂಪುಟದಲ್ಲಿ ತಮಗೆ ಸ್ಥಾನ ನೀಡಲಿಲ್ಲ ಎಂದು ಮುನಿಸಿಕೊಂಡಿರುವ ಯಾದಗಿರಿ ಶಾಸಕ ಡಾ. ಎಂ ಮಾಲಕ ರೆಡ್ಡಿ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ,  ಹೀಗಾಗಿ ಮಾಲಕ ರೆಡ್ಡಿ ಅವರನ್ನು ಸೆಳೆಯಲು ಬಿಜೆಪಿ ಬಲೆ ಬೀಸಿದೆ.ಆದರೆ ಯಾವುದೇ ತರಾತುರಿ ನಿರ್ಧಾರ ಕೈಗೊಳ್ಳದಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. 
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಕೂಡ ಪಕ್ಷ ತಮ್ಮನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿ ಬಿಜೆಪೆ ಸೇರಲು ಯತ್ನಿಸುತ್ತಿದ್ದಾರೆ, ಜೊತೆಗೆ ಕಿತ್ತೂರು ಶಾಸಕ ಡಿ.ಬಿ ಇನಾಮ್ದಾರ್ ಕೂಡ ಪಕ್ಷದ ನಾಯಕರು ನಮ್ಮನ್ನು ನಿರ್ಲಕ್ಷ್ಸಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
SCROLL FOR NEXT