ಕಲಬುರ್ಗಿ: ಇತ್ತೀಚೆಗಷ್ಟೇ ’ಕೈ’ ಬಿಟ್ಟು ’ಕಮಲ’ ಹಿಡಿದಿದ್ದ ಮಾಲಿಕಯ್ಯ ಗುತ್ತೇದಾರ್ ರಾಜಕೀಯ ನಡೆಯ ಬೆನ್ನಿಗೇ ಅಫಜಲಪುರದ ಮಾಜಿ ಬಿಜೆಪಿ ಶಾಸಕ ಎಂವೈ ಪಾಟೀಲ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆಅವರ ಸಮ್ಮುಖದಲ್ಲಿ ಪಾಟೀಲ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪರಮೇಶ್ವರ್ ಅವರು ಪಾಟೀಲ್ ಅವರಿಗೆ ಕಾಂಗ್ರೆಸ್ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅವರನ್ನು ಪಕ್ಷಕ್ಕೆ ವಿದ್ಯುಕ್ತವಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಪರಮೇಶ್ವರ್ "ನಾವು ಮಾಲಿಕಯ್ಯ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸಿದ್ದೆವು. ಆದರೆ ಅವರು ಪಕ್ಷದ ನಾಯಕರ ವಿರುದ್ಧವೇ ಮಾತನಾಡಿದ್ದ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಎಂವೈ ಪಾಟೀಲ್ ಈ ಭಾಗದಲ್ಲಿ ಒಳ್ಳೆಯ ಹೆಸರಿರುವ ನಾಯಕರಾಗಿದ್ದು ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ನಮಗೆ ಅತ್ಯಂತ ಸಂತಸ ತಂದಿದೆ" ಎಂದರು.
ಕಲಬುರ್ಗಿಯ ಅಫಜಲಪುರ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿದ್ದ ಹಿರಿಯ ಕಾಂಗ್ರೆಸ್ ಧುರೀಣ ಮಾಲಿಕಯ್ಯ ಗುತ್ತೇದಾರ್ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೇ ಹೇಳಿಕೆಗಳನ್ನು ನೀಡಿದ್ದರು. ಈ ಕಾರಣ ಕಾಂಗ್ರೆಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿತ್ತು.