ದಾವಣಗೆರೆ : 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಕೀರ್ಣ ಸ್ವರೂಪದ ಜಿಎಸ್ ಟಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಸರಳಗೊಳಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿಂದು ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ಕುರಿತು ವರ್ತಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳು ಉದ್ಯಮಿಗಳಿಗೆ ಮಾತ್ರ ಅನುಕೂಲವಾಗಲಿವೆ. ಜಿಎಸ್ ಟಿಯನ್ನು ಸಂಕೀರ್ಣಗೊಳಿಸುವ ಮೂಲಕ ಗಬ್ಬರ್ ಸಿಂಗ್ ತೆರಿಗೆ ಮಾಡಲಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಹಣದೊಂದಿಗೆ ನೀರವ್ ಮೋದಿ ಹಾಗೂ ಮೆಹೂಲ್ ಚೊಕ್ಸಿ ದೇಶದಿಂದ ಪರಾರಿಯಾಗಿದ್ದಾರೆ. ಆರ್ ಬಿಐ, ನ್ಯಾಯಾಂಗ ಮತ್ತಿತರ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ನಾಶಪಡಿಸುತ್ತಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ನೀತಿಗಳನ್ನು ಟೀಕಿಸಿದರು.
ದೇಶದಲ್ಲಿನ ಪ್ರತಿಯೊಬ್ಬರ ಪ್ರಗತಿಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಎಲ್ಲಾ ರಾಜ್ಯಗಳು, ಭಾಷೆಗಳು, ಅವರ ಸಂಪ್ರದಾಯ, ಮತ್ತು ಸಂಸ್ಕೃತಿಯನ್ನು ಕಾಂಗ್ರೆಸ್ ಗೌರವಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.