ದೇಶದಲ್ಲಿ ಅಮಿತ್ ಶಾ, ಮೋದಿ ಮಾತ್ರ ಮನುಷ್ಯರಾ?: ರಾಹುಲ್ ಗಾಂಧಿ
ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...
ಕೋಲಾರ: ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅಧ್ಯಕ್ಷರ ಅಗೌರವಯುತ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಎಲ್ಲಾ ಪ್ರತಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷರ ಪ್ರಕಾರ, ದೇಶದಲ್ಲಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರು ಮಾತ್ರ ಮನುಷ್ಯರು. ಬೇರೆಯವರೆಲ್ಲಾ ಪ್ರಾಣಿಗಳಾ ಎಂದು ಖಾರವಾಗಿಯೇ ಪ್ರಶ್ನಿಸಿದರು.
ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತರ ಮೇಲೆ ದೌರ್ಜನ್ಯ ಖಂಡನೀಯ. ಆದರೆ, ನಮ್ಮ ಪ್ರಧಾನಿ ಮಾತ್ರ ಈ ಬಗ್ಗೆ ಮಾತೇ ಆಡುತ್ತಿಲ್ಲ. ಅಂಬೇಡ್ಕರ್ ಪ್ರತಿಮೆ ಮುಂದೆ ಹೋಗಿ ನಮಸ್ಕಾರ ಮಾಡ್ತಾರೆ. ಆದರೆ, ಅಂಬೇಡ್ಕರ್ ಯಾವುದರ ಪರವಾಗಿ ಇದ್ದರೋ ಅದನ್ನೇ ನಾಶ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ನರೇಂದ್ರ ಮೋದಿ ಸರ್ಕಾರ ಸಂವಿಧಾನ ಬದಲಾವಣೆ ಮಾಡಲು ಹೋದರೆ ದೇಶದಾದ್ಯಂತ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.
ಮೋದಿ ಬ್ಯಾಂಕ್ ಲೂಟಿಕೋರರ ಪರವಾಗಿ ಇದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯಗೆ ಮೋದಿ ಬೆಂಬಲವಿದೆ. ಲೂಟಿಕೋರಿಗೆ ಎಷ್ಟು ಬೇಕಾದರೂ ಸಾಲ ಕೊಡುತ್ತಾರೆ. ಇನ್ನೊಂದೆಡೆ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
6ನೇ ಬಾರಿಗೆ ರಾಜ್ಯ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರಾಹುಲ್ ರ್ಯಾ ಲಿ ನಡೆಸಿದರು.