ಬೆಂಗಳೂರು: ತಾವು ಪ್ರತಿನಿಧಿಸುತ್ತಿರುವ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರನ್ನು ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸಪಡುತ್ತಿದ್ದರೂ ಕೂಡ ಇಲ್ಲಿನ ಒಕ್ಕಲಿಗ ಯುವಸಮೂಹ ಕಾಂಗ್ರೆಸ್ ವಿರುದ್ಧ ಮತ ಹಾಕಲು ನಿರ್ಧರಿಸಿದೆ.
ಜಿಲ್ಲಾ ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಎನ್.ರಾಜ್ ಕುಮಾರ್ ನೇತೃತ್ವದಲ್ಲಿ ವೇದಿಕೆಯ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಮತ ಹಾಕಲು ಸಂಕಲ್ಪ ಮಾಡಿದ್ದಾರೆ. ಅಲ್ಲದೆ ತಮ್ಮ ಸಮುದಾಯದವರಿಗೆ ಸಿದ್ದರಾಮಯ್ಯನವರಿಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದಾರೆ.
ಅವರ ರಾಜಕೀಯ ಭವಿಷ್ಯದಲ್ಲಿ ಒಂದು ಕಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಕ್ಕಲಿಗ ಸಮುದಾಯದವರ ವಿರುದ್ಧ ಸಿದ್ದರಾಮಯ್ಯನವರು ಇಂದು ಒಕ್ಕಲಿಗರ ವಿರುದ್ಧವೇ ದ್ವೇಷ ಸಾಧಿಸುತ್ತಿದ್ದಾರೆ ಎಂಬುದು ಅವರ ಆರೋಪವಾಗಿದೆ.