ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆ ಕಸರತ್ತು ಜೋರಾಗಿರುವಂತೆಯೇ ಇತ್ತ ಪಕ್ಷದ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿಆರ್ ಸುದರ್ಶನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ಟಿಕೆಟ್ ಹಂಚಿಕೆಯಿಂದ ವಿಆರ್ ಸುದರ್ಶನ್ ಅವರು ತೀವ್ರ ಅಸಮಾಧಾನಗೊಂಡಿದ್ದು, ಇದೇ ಕಾರಣಕ್ಕಾಗಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ವಿಆರ್ ಸುದರ್ಶನ್ ಅವರು ಕೋಲಾರ ಕ್ಷೇತ್ರ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮ ಹಂತದಲ್ಲಿ ಪಕ್ಷ ಮತ್ತೊಬ್ಬರಿಗೆ ಟಿಕೆಟ್ ನೀಡಿದೆ ಎಂದು ಆರೋಪಿಸಿ ಸುದರ್ಶನ್ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಸುದರ್ಶನ್ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಸುದರ್ಶನ್ ಅವರು, ಪಕ್ಷದ ಹಿರಿಯ ಮುಖಂಡ ನಾನು.. ಕೋಲಾರ ಕ್ಷೇತ್ರದಲ್ಲಿ ನಿನ್ನೆಯವರೆಗೂ ನನಗೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪಕ್ಷ ವಲಸಿಗರಿಗೆ ಮಣೆ ಹಾಕುತ್ತಿದೆ. ಹೀಗಾಗಿ ತಾವು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಅಲ್ಲದೆ ತಮ್ಮ ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ರವಾನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
'ನನ್ನ ಹಿರಿತನ ಅನುಭವನನ್ನು ಗಣನೆಗೆ ತೆಗೆದುಕೊಂಡಿಲ್ಲ. ನಿನ್ನೆಯವರೆಗೂ ನನಗೇ ಟಿಕೆಟ್ ನೀಡಲು ಪಕ್ಷ ಮುಂದಾಗಿತ್ತು. ಆದರೆ ಇದೀಗ ವಲಸಿಗರಿಗೆ ಮಣೆ ಹಾಕಲಾಗುತ್ತಿದೆ. ಮಾಗಡಿಯಿಂದ ಬಂದಿರುವ ಜಮೀರ್ ಪಾಷಾಗೆ ಟಿಕಿಟ್ ನೀಡಲಾಗಿದೆ. ಶ್ರೀನಿವಾಸ್ ಗೌಡ ಕೂಡ, ಜೆಡಿಎಸ್ ನವರು ಅವರಿಗೂ ಟಿಕೆಟ್ ನೀಡುವ ಚರ್ಚೆ ನಡೆಯುತ್ತಿದೆ. ಹೀಗಾದರೆ ಪ್ರಮಾಣಿಕ ಕಾಂಗ್ರೆಸ್ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ವಿಆರ್ ಸುದರ್ಶನ್ ಹೇಳಿದ್ದಾರೆ.