ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ-ಎಚ್.ಡಿಕೆ ಬಿರುಸಿನ ಪ್ರಚಾರ
ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.
ಸುಡುವ ಬಿಸಿಲನ್ನು ಲೆಕ್ಕಿಸದ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಉತ್ಸಾಹದಿಂದ ಮತಯಾಚಿಸಿದರು. ಹಳೇ ಮೈಸೂರು ಭಾಗದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇಬ್ಬರು ನಾಯಕರಿಗೆ ಚಾಮುಂಡೇಶ್ವರಿ ಕ್ಷೇತ್ರ ವೇದಿಕೆಯಾಗಿದೆ.
ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಎರಡು ದಿನಗಳಿಂದ ಮತ ಯಾಚನೆ ಮಾಡುತ್ತಿರುವ ಕುಮಾರಸ್ವಾಮಿ, ಮೂರನೇ ದಿನವೂ ರೋಡ್ ಷೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಹತ್ತು ವರ್ಷಗಳ ಬಳಿಕ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಳಿರುವ ಸಿದ್ದರಾಮಯ್ಯ ಮೂರನೇ ಹಂತದ ಪ್ರಚಾರ ಆರಂಭಿಸಿದ್ದಾರೆ..
ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ಲಿಂಗಾಂಬುಧಿ ಪಾಳ್ಯದ ಸಿದ್ಧಪ್ಪಾಜಿ, ರಾಮಮಂದಿರ, ಮಂಟೇಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದರು. ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು, ಕತ್ತಿಯನ್ನು ಕೊಡುಗೆ ನೀಡಿದರು. ವೀರಗಾಸೆ ಕುಣಿತದ ರೀತಿಯಲ್ಲಿ ಕತ್ತಿ ತಿರುಗಿಸಿದ ಸಿದ್ದರಾಮಯ್ಯ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
ಐದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಮೊದಲ ದಿನವೇ 18 ಹಳ್ಳಿಗಳನ್ನು ಸುತ್ತಿದರು. ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತ ಯಾಚಿಸಿದರು. ಪ್ರತಿ ಗ್ರಾಮದಲ್ಲಿಯೂ ದೇಗುಲಗಳಿಗೆ ಭೇಟಿ ನೀಡಿ ಮಂಗಳಾರತಿ ಪಡೆದರು. ಅಲ್ಲಲ್ಲಿ ವಾಹನದಿಂದ ಕೆಳಗೆ ಇಳಿದು ಓಣಿಗಳಲ್ಲಿ ಹೆಜ್ಜೆ ಹಾಕಿದರು.
ಸಿದ್ದರಾಮಯ್ಯ ಅವರ ಜೊತೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸಹ ಇಂದು ಅವರ ಜತೆ ಪ್ರಚಾರದಲ್ಲಿ ತೊಡಗಿಸಿಕೊಂಡರು.
ಲಿಂಗಾಂಬುಧಿ ಪಾಳ್ಯದಲ್ಲಿ ನಡೆದ ಭೋವಿ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡರು. ‘2006ರ ಉಪಚುನಾವಣೆಯ ಬಳಿಕ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಳಿದ್ದೇನೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ’ ಎಂದು ಪ್ರಶ್ನಿಸಿದರು. ಕಾರ್ಯಕರ್ತರು ಕೈ ಮೇಲೆತ್ತಿ ಬೆಂಬಲ ಸೂಚಿಸಿದ ಬಳಿಕ ಮಾತು ಮುಂದುವರಿಸಿದರು. ಏ.20ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಘೋಷಿಸಿದರು.
ಈವರೆಗೂ ಶಾಸಕನಾಗುವ ಬಯಕೆಯಿಂದ ನಿಮ್ಮೆದುರು ಬರುತ್ತಿದ್ದೆ. ಐದು ಬಾರಿ ಆಶೀರ್ವದಿಸಿದ ಪರಿಣಾಮ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ ಎಂದು ಎಲ್ಲೆಡೆ ಮತ ಯಾಚನೆ ಮಾಡಿದರು.
ಮೂರು ದಿನಗಳಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರೊಂದಿಗೆ ಸುಮಾರು 70 ಗ್ರಾಮಗಳನ್ನು ಸುತ್ತಿದರು. ವಿಶೇಷ ವಿನ್ಯಾಸದ ಬಸ್‌ನಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಪ್ರಚಾರ ನಡೆಸಿದರು. ಹೂವಿನಹಾರ ಹಾಕುವ ಮೂಲಕ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಕೈಬೀಸುತ್ತ, ಕೈ
ಮುಗಿದು ನಗುಮೊಗ ತೋರುತ್ತಲೇ ವಾಹನದಲ್ಲಿ ಸಂಚರಿಸಿ ಪ್ರಚಾರ ನಡೆಸಿದರು.
ಆದರೆ ಮಾರ್ಬಳ್ಳಿ ಹುಂಡಿಯಲ್ಲಿ ಕೆಲ ಯುವಕರು ನನ್ನ ವಿರುದ್ಧ ಕಾಂಗ್ರೆಸ್ ಭಾವುಟ ತೋರಿ ನಾನು ಪ್ರತಿಕ್ರಿಯೆ ತೋರುವಂತೆ ಪ್ರಚೋದಿಸಿದರು, ಮುಂಜಾಗರೂಕತೆ ಕ್ರಮವಾಗಿ ಪೊಲೀಸರು ಅವರನ್ನು ತಡೆದಿದ್ದರು, ಆದರೆ ನಾನೇ ಪೊಲೀಸರಿಗೆ ಹೇಳಿ ಅವರು ನನ್ನ ಹತ್ತಿರಕ್ಕೆ ಬಿಡುವಂತೆ ಹೇಳಿದೆ,. ಇದೆಲ್ಲಾ ಸಿಎಂ ಸಿದ್ದರಾಮಯ್ಯ ಅವರ ಗಿಮಿಕ್ ಆಗಿದೆ ಎಂದು ಎಚ್ ಡಿಕೆ ಆರೋಪಿಸಿದರು.
ಪ್ರಚಾರದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಸ್ನೇಹಿತ ಎಚ್ ಸಿ ಮಹಾದೇವಪ್ಪ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ, ಪಾಂಡವಪುರ ಕ್ಷೇತ್ರವನ್ನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನೀಡಿದ್ದೇವೆ , 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರವೆ ಪ್ರಕಟಿಸಲಾಗುವುದು ಎಂದ ಅವರು, ಮತದಾರರು ಎಚ್ ಡಿ ಕುಮಾರ ಸ್ವಾಮಿ ಪಾಕೆಟ್ ನಲ್ಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos