ಹರತಾಳು ಹಾಲಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಎಸ್ ಎನ್ ಕೃಷ್ಣಯ್ಯ ಶೆಟ್ಟಿ
ಬೆಂಗಳೂರು: ಮೇ 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ 82 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವು ಕಳಂಕಿತ ನಾಯಕರಿಗೆ ಟಿಕೆಟ್ ನೀಡಲಾಗಿದೆ, 2009 ರಲ್ಲಿ ನಡೆದಿದ್ದ ಅತ್ಯಾಚಾರೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಹರತಾಳು ಹಾಲಪ್ಪ ಹಾಗೂ ಮಾಜಿ ಸಚಿವ ಕಟ್ಟ ಸುಬ್ರಮಣ್ಯ ನಾಯ್ಡು, ಎಸ್.ಎನ್ ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ.
ಶಿವಾಜಿನಗರ ಕ್ಷೇತ್ರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ, ಇವರ ವಿರುದ್ಧ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ರೋಷನ್ ಬೇಗ್ ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿದ್ದಾರೆ, ಭೂ ಹಗರಣದ ಆರೋಪದ ಮೇಲೆ ಕಟ್ಟಾ ಸುಬ್ರಮಣ್ಯ ನಾಯ್ಡು 2011 ರಲ್ಲಿ ಜೈಲು ಪಾಲಾಗಿದ್ದರು.
2006ರಲ್ಲಿ ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜಾಲ ಹೋಬಳಿ ಬಂಡಿಕೊಡಿಗೆಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶೇಷ ವಿತ್ತ ವಲಯ ಮತ್ತು ಐಟಿ ಪಾರ್ಕ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದ ಇಟಾಸ್ಕಾ ಕಂಪನಿಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.
ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣಯ್ಯ ಶೆಟ್ಟಿ ವಿರುದ್ದ 2011ರಲ್ಲಿ ಬಹುಕೋಟಿ ಭೂ ಹಗರಣ ಸಂಬಂಧ ಕೇಸ್ ದಾಖಲಾಗಿತ್ತು. ನಂತರ ಖುಲಾಸೆಯಾಗಿದ್ದಾರೆ,
ಇನ್ನೂ 2009ರಲ್ಲಿ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದ ಹರತಾಳು ಹಾಲಪ್ಪ ಅವರನ್ನು ಖುಲಾಸೆಗೊಳಿಸಲಾಗಿತ್ತು. ಸದ್ಯ ಶಿವಮೊಗ್ಗದ ಸಾಗರ ವಿಧಾನಸಕ್ಷೆ ಕ್ಷೇತ್ರದಿಂದ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಬೇಳೂರು ಗೋಪಾಲಕೃಷ್ಣ ಬಂಡಾಯ ಎದ್ದಿದ್ದಾರೆ,
ಮಾಜಿ ಸಚಿವ ಗಣಿಧಣಿ ಜನಾರ್ಧನ ರೆಡ್ಡಿಗೂ ಬಿಜೆಪಿ ಸಂಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದರು, ಆದರೆ ಜನಾರ್ಧನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿಗೆ ಬಳ್ಳಾರಿ ಟಿಕೆಟ್ ನೀಡಿದ್ದಾರೆ.
ಇನ್ನೂ ನರ್ಸ್ ಜಯಲಕ್ಷ್ಮಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿದ್ದ ಎಂಪಿ ರೇಣುಕಾಚಾರ್ಯಗೂ ಹೊನ್ನಾಳಿಯಿಂದ ಟಿಕೆಟ್ ನೀಡಲಾಗಿದೆ.