ರಾಜಕೀಯ

ಮುಸ್ಲಿಮರ ಮತಗಳು ವಿಭಜನೆಯಾದರೂ ಕಾಂಗ್ರೆಸ್ ಗೆ ಅಲ್ಪಸಂಖ್ಯಾತ ಸಮುದಾಯದ ಮತ ಸಿಗುವ ವಿಶ್ವಾಸ

Srinivas Rao BV
ಬೆಂಗಳೂರು: ಅಹಿಂದ ಕಾರ್ಡ್ ಮೂಲಕ ಚುನಾವಣೆ ಗೆಲ್ಲುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ಅಹಿಂದ ಸಂಘಟನೆಯ ಪೈಕಿ ಪ್ರಮುಖವಾಗಿ ಅಲ್ಪಸಂಖ್ಯಾತ (ಮುಸ್ಲಿಮರ) ಸಮುದಾಯ ಕಾಂಗ್ರೆಸ್ ಪರವಾಗಿದೆ. 
ರಾಜ್ಯದಲ್ಲಿ ಶೇ.12-16 ರಷ್ಟು ಮುಸ್ಲಿಮ್ ಜನಸಂಖ್ಯೆ ಇದ್ದು, ಈ ಹಿಂದಿನ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಟಿಪ್ಪು ಜಯಂತಿ ಆಚರಣೆ ಅಸ್ತಿತ್ವಕ್ಕೆ ಬಂದಿದ್ದು, ಮುಸ್ಲಿಂ ಸಮುದಾಯದ ಬೆಂಬಲ ಕಾಂಗ್ರೆಸ್ ಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 
ಆದರೆ ರಾಜ್ಯ ರಾಜಕಾರಣಕ್ಕೆ ಜೆಡಿಎಸ್, ಬಿಎಸ್ ಪಿ ಬೆಂಬಲದಿಂದ ಎಂಐಎಂ ಪಕ್ಷ ಎಂಟ್ರಿ ನೀಡಿರುವುದರಿಂದ ಮುಸ್ಲಿಂ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗಿನ ಹಿನ್ನಡೆಯುಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 
ಇನ್ನು ಕರಾವಳಿ ಪ್ರದೇಶದಲ್ಲಿ ಎಸ್ ಡಿಪಿಐ ಸಂಘಟನೆ ಸಹ ಸಕ್ರಿಯವಾಗಿದ್ದು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ ಗೆ ಸ್ವಲ್ಪ ಹಿನ್ನಡೆಯುಂಟಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ನಿಂದ ಮುಸ್ಲಿಂ ಸಮುದಾಯದ 26 ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಒತಡವೂ ಇದ್ದು, ಇದಕ್ಕೆ ಕಾಂಗ್ರೆಸ್ ನಾಯಕ ಎ ರೆಹಮಾನ್ ಖಾನ್ ಸಹ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.  ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮುಸ್ಲಿಂ ಸಮುದಾಯದ ಬೇಡಿಕೆಯನ್ನು ತಳ್ಳಿಹಾಕಿದ್ದು, ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವ ಪ್ರದೇಶಗಳನ್ನು ಸಮೀಕ್ಷೆ ಮೂಲಕ ತಿಳಿದುಕೊಳ್ಳಲಾಗಿದ್ದು, ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
ಒಟ್ಟಾರೆಯಾಗಿ ಎಂಐಎಂ, ಜೆಡಿಎಸ್, ಬಿಎಸ್ ಪಿ ಪಕ್ಷಗಳಿಂದ ಸ್ವಲ್ಪ ಮಟ್ಟಿಗೆ ಮುಸ್ಲಿಂ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದರೂ ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚು ಪಡೆಯುವ ವಿಶ್ವಾಸದಲ್ಲಿದೆ.
SCROLL FOR NEXT