ರಾಜಕೀಯ

ಈ ಬಾರಿ ಅತಂತ್ರ ವಿಧಾನಸಭೆ: ಟೈಮ್ಸ್ ನೌ- ವಿಎಂಆರ್ ಮತದಾನ ಪೂರ್ವ ಸಮೀಕ್ಷೆ

Lingaraj Badiger
ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲೂ ತೀವ್ರ ಕುತೂಹಲ ಮೂಡಿಸಿರುವ ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಟೈಮ್ಸ್ ನೌ ಹಾಗೂ ವಿಎಂಆರ್ ಜಂಟಿಯಾಗಿ ನಡೆಸಿದ ಮತದಾನ ಪೂರ್ವ ಸಮೀಕ್ಷೆ ಹೇಳಿದೆ.
ಆಡಳಿತಾರೂಢ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದು, 224 ಕ್ಷೇತ್ರಗಳ ಪೈಕಿ ಕೇವಲ 91 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. 
ಇನ್ನು ಪ್ರಮುಖ ಪ್ರತಿಪಕ್ಷ ಬಿಜೆಪಿ 89 ಸ್ಥಾನಗಳನ್ನು ಪಡೆಯಲಿದ್ದು, ಜೆಡಿಎಸ್ 40 ಸ್ಥಾನಗಳನ್ನು ಪಡೆದರೆ, ಇತರರು ನಾಲ್ಕು ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಮತದಾನ ಪೂರ್ವ ಸಮೀಕ್ಷೆ ತಿಳಿಸಿದೆ.
224 ಸದಸ್ಯ ಬಲದ ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಸರಳ ಬಹುಮತಕ್ಕಾಗಿ ಯಾವುದೇ ಒಂದು ಪಕ್ಷ 112 ಸ್ಥಾನಗಳನ್ನು ಗೆಲ್ಲಬೇಕಿದೆ.
ಮತ ಹಂಚಿಕೆ ಪ್ರಕಾರ ಹೇಳುವುದಾದರೆ ಕಾಂಗ್ರೆಸ್‌ ಶೇ.38.6ರಷ್ಟು ಮತಗಳನ್ನು ಗಳಿಸಲಿದೆ. ಬಿಜೆಪಿಗೆ ಶೇ.35.03 ರಷ್ಟು ಮತಗಳು ದಕ್ಕಲಿವೆ. ಜೆಡಿಎಸ್‌-ಬಿಎಸ್‌ಪಿ ಗೆ ಒಟ್ಟಾರೆಯಾಗಿ ಶೇ.21.33ರಷ್ಟು ಮತಗಳು ಪ್ರಾಪ್ತವಾಗಲಿವೆ. 
ಇನ್ನು ಎಬಿಪಿ ಸಮೀಕ್ಷೆ ಪ್ರಕಾರ ಬಿಜೆಪಿ 89ರಿಂದ 91 ಸೀಟ್ ಗೆಲ್ಲಲಿದೆ. ಆಡಳಿತಾರೂಢ ಕಾಂಗ್ರೆಸ್ 85 ರಿಂದ 91 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಲಿದೆ. ಇನ್ನೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ 32 ರಿಂದ 38, ಇತರೆ 6 ರಿಂದ 12 ಕ್ಷೇತ್ರಗಳನ್ನು ಬಾಚಿಕೊಳ್ಳಲಿದ್ದಾರೆ.
ಈ ಎರಡೂ ಸಮೀಕ್ಷೆ ಗಳ ಪ್ರಕಾರ ಈ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.
SCROLL FOR NEXT