ಬಾದಾಮಿ: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಇಳಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಾದಾಮಿಯ ಗೆಲುವು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಾದಾಮಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಕುರುಬ ಸಮುದಾಯದ ಮತಗಳನ್ನು ನೆಚ್ಚಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಕುರುಬ ಸಮುದಾಯದ ಜತೆಗೆ ಲಿಂಗಾಯತರು, ವಾಲ್ಮೀಕಿ ಸಮುದಾಯದವರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಿದ್ಧರಾಮಯ್ಯನವರ ಗೆಲುವು ಹೇಳಿಕೊಂಡಷ್ಟು ಸುಸೂತ್ರವಾಗಲ್ಲ ಎಂದು ರಾಜಕೀಯ ಪಂಡಿತರು ಲೆಕ್ಕಚಾರ ಹಾಕುತ್ತಿದ್ದಾರೆ.
ಇನ್ನು ಬಾದಾಮಿ ವಿಧಾನಸಭಾ ಕ್ಷೇತ್ರದ ಇತಿಹಾಸದತ್ತ ಕಣ್ಣಾಡಿಸಿದರೇ ಅಲ್ಲಿ ಲಿಂಗಾಯತ, ಕುರುಬ ಸಮುದಾಯದ ಅಭ್ಯರ್ಥಿಗಳೇ ಹೆಚ್ಚಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕೆಜೆಪಿ ಹಾಗೂ ಬಿಜೆಪಿಯಿಂದ ಲಿಂಗಾಯತ ಸಮುದಾಯದ ನಾಯಕರುಗಳು ಚುನಾವಣಾ ಸ್ಪರ್ಧೆಯಲ್ಲಿ ಇದ್ದ ಜತೆಗೆ ಬಿಎಸ್ಆರ್ ಕಾಂಗ್ರೆಸ್‌ನಿಂದಲೂ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಈ ಸಮುದಾಯದ ಮತಗಳು ವಿಭಜನೆಯಾಗಿ ಕುರುಬ ಸಮುದಾಯಕ್ಕೆ ಸೇರಿದ ಬಿ.ಬಿ.ಚಿಮ್ಮನಕಟ್ಟಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಎಲ್ಲರೂ ಒಟ್ಟಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೋಲಿಸಲು ಮುಂದಾಗಿರುವುದರಿಂದ ಸಿದ್ಧರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶತಾಯಗತಾಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಹಠ ತೊಟ್ಟಿದ್ದು, ಚಾಮುಂಡೇಶ್ವರಿಯಲ್ಲಿ ಅದರ ಬಿಸಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಟ್ಟಿದೆ. ಇದನ್ನು ಅರಿತು ಬಾದಾಮಿಯತ್ತ ಮುಖ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ 3-4 ದಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸುತ್ತಾಡಿದ ಸಿದ್ಧರಾಮಯ್ಯನವರಿಗೆ ಕ್ಷೇತ್ರದ ಪರಿಸ್ಥಿತಿ ಮನವರಿಕೆಯಾದ ಮೇಲೆಯೇ ಅವರು ರಾಜಕೀಯ ಭವಿಷ್ಯದ ದೃಷ್ಠಿಯಿಂದ ಸುರಕ್ಷಿತ ಹಾಗೂ ಒಳ್ಳೆಯದು ಎಂಬ ಕಾರಣಕ್ಕೆ ಬಾದಾಮಿಯಲ್ಲಿ ಕಣಕ್ಕಿಳಿದಿದ್ದಾರೆ.
ಆದರೆ ಇದೀಗ ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯ ಗೆಲುವು ಸುಲಭವಾಗಿಲ್ಲ. ಬಾದಾಮಿ ಕ್ಷೇತ್ರದ ಜಾತಿ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೆ ಸುಮಾರು 47 ಸಾವಿರ ಕುರುಬರು, 32 ಸಾವಿರ ಲಿಂಗಾಯತರು, 22 ಸಾವಿರ ನಾಯಕ ಸಮುದಾಯದವರು, ಸುಮಾರು 25 ಸಾವಿರ ದಲಿತ ಸಮುದಾಯದವರು, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಅಹಿಂದ ಮತಗಳನ್ನು ನೆಚ್ಚಿಕೊಂಡೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಗೆಲ್ಲುವ ತವಕದಲ್ಲಿದ್ದಾರೆ.
ಸಿದ್ದು ಗೆಲುವಿಗೆ ಶ್ರೀರಾಮುಲು ಅಡ್ಡಗಾಲು
ಇನ್ನು ಸಿದ್ಧರಾಮಯ್ಯನವರ ಗೆಲುವಿಗೆ ತಡೆವೊಡ್ಡಲು ಬಿಜೆಪಿ ತನ್ನದೇ ರಣತಂತ್ರ ರೂಪಿಸಿದ್ದು, ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಈ ಹಿಂದೆ ಶ್ರೀರಾಮುಲು ಅವರನ್ನು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು. ಅದರಂತೆ ಶ್ರೀರಾಮುಲು ಅವರೂ ಕೂಡ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಶ್ರೀರಾಮುೃಲು ಅವರ ಕ್ಷೇತ್ರವನ್ನು ಬಾದಾಮಿಗೆ ಬದಲಾಯಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.
ಸಂಸದ ಶ್ರೀರಾಮುಲು ಅವರನ್ನು ಬಾದಾಮಿಯಲ್ಲಿ ಸಿದ್ಧರಾಮಯ್ಯ ವಿರುದ್ದ ಕಣಕ್ಕಿಳಿಸಿದರೆ ನಾಯಕ ಜನಾಂಗದ ಮತಗಳು, ಲಿಂಗಾಯತ ಮತಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ದಲಿತ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಈ ಎಲ್ಲ ಲೆಕ್ಕಾಚಾರಗಳನ್ನು ಗಮನಿಸಿದರೆ ಬಾದಾಮಿಯಲ್ಲಿ ಸಿದ್ಧರಾಮಯ್ಯನವರ ಗೆಲುವು ಅಷ್ಟು ಸುಲಭವಲ್ಲ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಹಂತೇಶ ಮಮದಾಪುರ ಅವರು 47 ಸಾವಿರ ಮತ ಗಳಿಸಿದ್ದರು. ಇಲ್ಲಿ ಗೆಲುವು ಸಾಧಿಸಿದ ಚಿಮ್ಮನಕಟ್ಟಿ ಅವರು 54 ಸಾವಿರ ಮತ ಪಡೆದಿದ್ದರು. ಬಿಜೆಪಿಯ ಎನ್.ಕೆ. ಪಟ್ಟಣಶೆಟ್ಟಿ ಸಹ ಗಣನೀಯ ಮತ ಪಡೆದಿದ್ದರು. ಈಗ ಮಹಂತೇಶ್ ಮಮದಾಪುರ ಅವರು ಬಿಜೆಪಿಯಲ್ಲಿ ಇರುವುದರಿಂದ ಅವರು ಮತ್ತು ಎನ್.ಕೆ. ಪಟ್ಟಣಶೆಟ್ಟಿ ಒಟ್ಟಾಗಿ ಕೆಲಸ ಮಾಡಿದರೆ ಸಿದ್ಧರಾಮಯ್ಯನವರಿಗೆ ಸೋಲು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಹಾಗಾಗಿಯೇ ಬಿಜೆಪಿ ವರಿಷ್ಠರು ಸಹ ಎಲ್ಲವನ್ನೂ ಅಳೆದು ತೂಗಿ ಪಕ್ಷದ ಶ್ರೀರಾಮುಲು ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics