ಬೆಂಗಳೂರು: ಅತ್ತ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಮಾಜಿ ಸಚಿವ ಗಣಿ ಧಣಿ ಜನಾರ್ಧನ ರೆಡ್ಡಿ ಅವರನ್ನು ರಾಜ್ಯದ ಹಿತದೃಷ್ಟಿಯಿಂದ ಕ್ಷಮಿಸಿರುವುದಾಗಿ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಬಿಎಸ್ ಯಡಿಯೂರಪ್ಪ ರಾಜ್ಯದ ಹಿತದೃಷ್ಟಿಯಿಂದ ಜನಾರ್ಧನ ರೆಡ್ಡಿ ಅವರನ್ನುಕ್ಷಮಿಸಿದ್ದು, ಅವರಿಂದ ರಾಜ್ಯದಲ್ಲಿ ಬಿಜೆಪಿ 15 ರಿಂದ 20 ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದರು. ಇದೇ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಯಡಿಯೂರಪ್ಪ ಹೇಳಿಕೆಯನ್ನು ಹಿನ್ನಲೆಯಾಗಿಸಿಕೊಂಡು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮ್ಯ ಬಿಜೆಪಿ ರಾಜ್ಯಾಧ್ಯಕ್ಷರ ಕಾಲೆಳೆದಿದ್ದಾರೆ.
ಯಡಿಯೂರಪ್ಪ ಅವರಿಗೆ ಟ್ವಿಟರ್ ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿರುವ ಸಿಎಂ ಸಿದ್ದರಾಮಯ್ಯ, 'ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದ ಜನಾರ್ಧನ ರೆಡ್ಡಿ ಅವರನ್ನು ಬಿಎಸ್ ಯಡಿಯೂರಪ್ಪ ಅದ್ಯಾವ ಹಿತದೃಷ್ಟಿಯ ಆಧಾರದ ಮೇಲೆ ಕ್ಷಮಿಸಿದರು? ರಾಜ್ಯದ ಜನತೆಯ ಅಪಾರ ಪ್ರಮಾಣದ ಸಂಪತ್ತನ್ನು ದೋಚಿದ ಜನಾರ್ಧನರೆಡ್ಡಿಯನ್ನುಕ್ಷಮಿಸುವುದು ಬಿಡುವುದು ನಿಮಗೆ ಬಿಟ್ಟಿದ್ದೇ? ರೆಡ್ಡಿ ಕ್ಷಮೆಯ ಔಪಚಾರಿಕಗೊಳಿಸಲು ಸಿಬಿಐ ಸಂಸ್ಥೆಗೆ ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜನಾರ್ಧನ ರೆಡ್ಡಿ ಬಾಹ್ಯ ಪ್ರಚಾರಕ್ಕೆ ಬಿಜೆಪಿ ಬ್ರೇಕ್
ಇತ್ತ ಜನಾರ್ಧನ ರೆಡ್ಡಿ ಪ್ರಚಾರದ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗುತ್ತಿದ್ದಂತೆಯೇ ಇದೀಗ ಎಚ್ಚೆತ್ತುಕೊಂಡಿರುವ ಬಿಜೆಪಿ, ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಾರ್ಧನ ರೆಡ್ಡಿಗೆ ಸೂಚನೆ ನೀಡಿದ್ದಾರೆ. ಬಾಹ್ಯ ಬೆಂಬಲ ಅಥವಾ ಬಾಹ್ಯ ಪ್ರಚಾರಕ್ಕೆ ಬದಲಾಗಿ ಆಂತರಿಕ ಬೆಂಬಲ ಮತ್ತು ಆಂತರಿಕ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆ ಮೂಲಕ ಮೊಳಕಾಲ್ಮೂರಿನಲ್ಲಿ ನಡೆಯುವ ಪಕ್ಷದ ಬಹಿರಂಗ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಿರುವಂತೆ ಪರೋಕ್ಷ ಸಲಹೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics