ರಂಗೇರುತ್ತಿರುವ ಚುನಾವಣಾ ಕಾವು: ಆರೋಪ, ಪ್ರತ್ಯಾರೋಪಗಳಲ್ಲಿ ಮೋದಿ ಮತ್ತು ರಾಹುಲ್ ಗಾಂಧಿ
ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು ...
ಬೆಂಗಳೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದರು.
ನಿನ್ನೆ ಮೊದಲು ಆರೋಪ ಆರಂಭಿಸಿದ್ದು ಪ್ರಧಾನಿ ಮೋದಿಯವರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸ್ಕೃತಿ ದೇಶವನ್ನು ನಾಶಮಾಡಿದೆ ಎಂಬುದನ್ನು ಯಾರಾದರೂ ನಿರಾಕರಿಸಲು ಸಾಧ್ಯವೇ? ಭಾರತದ ರಾಜಕೀಯದ ಮುಖ್ಯವಾಹಿನಿಯಿಂದ ಕಾಂಗ್ರೆಸ್ ನ್ನು ಬುಡಸಮೇತ ತೊಲಗಿಸದಿದ್ದರೆ ದೇಶದ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಜೆಪಿ ಅಭ್ಯರ್ಥಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.
ನಂತರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಿನ್ನೆ ಎರಡು ದಿನಗಳ ಪ್ರಚಾರ ಕಾರ್ಯ ಆರಂಭಿಸಿದ ರಾಹುಲ್ ಗಾಂಧಿ, ಪ್ರಧಾನಿಯವರ ವಿರುದ್ಧ ವಾಗ್ದಾಳಿ ನಡೆಸಿ ನೀರವ್ ಮೋದಿ ಮತ್ತು ವಿಜಯ್ ಮಲ್ಯರಂತಹ ಉದ್ಯಮಿಗಳಿಗೆ ಪ್ರಧಾನಿ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಾಲಗಳನ್ನು ಮನ್ನಾ ಮಾಡಿ ಎಂದು ಪ್ರಧಾನಿಯವರನ್ನು ಕೇಳಿಕೊಂಡೆ. ಆದರೆ ಎನ್ ಡಿಎಯಲ್ಲಿ ಸಾಲ ಮನ್ನಾದಂತಹ ಯಾವುದೇ ಯೋಜನೆಗಳಿಲ್ಲ ಎಂದು ಅವರು ನಿರಾಕರಿಸಿದರು. ಆದರೆ ದೊಡ್ಡ ದೊಡ್ಡ ಉದ್ಯಮಿಗಳ ಸಾಲಗಳನ್ನು ಅನುತ್ಪಾದಕ ಆಸ್ತಿಗಳ ಹೆಸರಿನಲ್ಲಿ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮನ್ನಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ನಡೆದ ರೋಡ್ ಶೋದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನ ಹಿರಿಯ ಸಚಿವರು ಭಾಗಿಯಾಗಿದ್ದರು.