ಬೆಂಗಳೂರು: ರಾಷ್ಟ್ರ ರಾಜಕೀಯದ ಮೇಲೆ ಕರ್ನಾಟಕ ವಿಧಾನಸಭೆ ಚುನಾವಣೆ ಪರಿಣಾಮ ಬೀರುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಲಹೆಗಾರ ಸ್ಯಾಮ್ ಪಿತ್ರೋಡ ಅವರು ಹೇಳಿದ್ದಾರೆ.
ಬೆಂಗಳೂರು ನಗರಕ್ಕಾಗಿಯೇ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪಿತ್ರೋಡ, ದೇಶದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ವಿಧಾನಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮೇ 12ರಂದು ನಡೆಯುವವಿಧಾನಸಭೆ ಚುನಾವಣೆ ಕೇವಲ ರಾಜ್ಯಕ್ಕೆ ಮಾತ್ರವಲ್ಲಿ ಇಡೀ ದೇಶಕ್ಕೆ ಎಂದಿರುವ ಅವರು. ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, 2019ರ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದಿದ್ದಾರೆ.
ಕಳೆದ ಎರಡು ದಶಕಗಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಇಂದು ಇಡೀ ಜಗತ್ತು ಬೆಂಗಳೂರಿನತ್ತ ನೋಡುತ್ತಿದೆ ಎಂದು ಪಿತ್ರೋಡ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಐದು ವರ್ಷಗಳಲ್ಲಿ ಅಭಿವೃದ್ಧಿ, ಸಾಮಾಜಿಕ ಅಸಮತೋಲನ ನಿವಾರಣೆ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮಹತ್ವದ ಸಾಧನೆ ಮಾಡಿದೆ. ಆದರೆ, ಅದನ್ನು ಎದುರಿಸಬೇಕಾದ ಪ್ರತಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದರು.