ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್
ಬೆಂಗಳೂರು: ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ 2019ರಲ್ಲಿಯೂ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಚುನಾವಣೆಗಳೇ ಇರುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಅವರು ಶನಿವಾರ ಹೇಳಿದ್ದಾರೆ.
ಅಜಯ ಪಿರಾಮಲ್ ಒಡೆತನದ ಸಮೂಹಕ್ಕೆ ಸೇರಿದ ಶೇರುಗಳನ್ನು ಪಿರಾಮಲ್ ಎಸ್ಟೇಟ್ಸ್ ಪ್ರೈ.ಲಿ.ಗೆ ಮಾರಾಟ ಮಾಡಿದ್ದರಲ್ಲಿ ಕೇಂದ್ರ ಸಚಿವ ಹಾಗೂ ಕರ್ನಾಟಕ ಚುನಾವಣೆಯ ಬಿಜೆಪಿ ಉಸ್ತುವಾರಿ ಪಿಯೂಷ್ ಗೋಯಲ್ ಅವರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆಂದು ಆರೋಪಿಸಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಧಾನಮಂತ್ರಿಗಳು ಕಾರ್ಯನಿರ್ವಹಿಸುತ್ತಿರುವ ರೀತಿ ಹೀಗೆಯೇ ಮುಂದುವರೆದರೆ, ದೇಶದಲ್ಲಿ ಸಾಕಷ್ಟು ಆತಂಕಕರ ವಾತಾವರಣ ನಿರ್ಮಾಣವಾಗಲಿದೆ.
ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪಕ್ಷಗಳೂ ಒಗ್ಗೂಡಬೇಕಿದೆ ಎಂದ ಅವರು, ಮೈತ್ರಿ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷ. ಕರ್ನಾಟಕ ವಿಧಾನಸಭೆ ಚುನಾವಣೆ ಅತ್ಯಂತ ಮುಖ್ಯವಾದದ್ದು. ಹೀಗಾಗಿ ಎಲ್ಲಾ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಬೇಕಿದೆ ಎಂದು ಹೇಳಿದ್ದಾರೆ.
ಪಿಯೂಷ್ ಗೋಯಲ್ ಅವರು ಖಾಸಗಿ ಕಂಪನಿಯಲ್ಲಿ ಹೊಂದಿದ್ದ ಶೇರುಗಳನ್ನು ಮುಖಬೆಲೆಯ ಸುಮಾರು 1000 ಪಟ್ಟು ಬೆಲೆಗೆ ಮಾರಾಟ ಮಾಡಿರುವುದು, ಲಂಚ ಸ್ವೀಕಾರ, ಸಾರಾಸಗಟು ಅನೌಚಿತ್ಯ ಮತ್ತು ಹಿತಾಸಕ್ತಿಗಳ ಸಂಘರ್ಷವಾಗಿದೆ ಎಂದು ಇದೇ ವೇಳೆ ಆರೋಪ ಮಾಡಿದ್ದಾರೆ.