ಮೈಸೂರು: ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‍ಡಿ ದೇವೇಗೌಡ ಹೇಳುವ ಮೂಲಕ ಸ್ವಂತ ಸಾಮರ್ಥ್ಯದಿಂದ ಅಧಿಕಾರದ ಗದ್ದುಗೆ ಹಿಡಿಯುವ ಸಂದೇಶವನ್ನು ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಗಲೀ ಅಥವಾ ಬಿಜೆಪಿ ಆಗಲೀ ಅಧಿಕಾರಕ್ಕೆ ಬರುವುದಿಲ್ಲ, ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ 40 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ವರದಿ ತಳ್ಳಿಹಾಕಿದ ದೇವೇಗೌಡ, ಕಾಂಗ್ರೆಸ್ , ಬಿಜೆಪಿಗಿಂತಲೂ ಅಧಿಕ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ .ಒಂದು ವೇಳೆ ಕಡಿಮೆ ಸ್ಥಾನಗಳನ್ನು ಪಡೆದರೂ ಕೂಡಾ ಅಧಿಕಾರಕ್ಕೆ ಬರುವುದಾಗಿ ಅವರು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜ್ಯೂನಿಯರ್ ದೇವೇಗೌಡ ( ಜಿ.ಟಿ. ದೇವೇಗೌಡ ) ಸಾಮರ್ಥ್ಯ ಹೊಂದಿದ್ದು, ಸೋಲಿನ ಭೀತಿಯಿಂದಾಗಿ ಸಿದ್ದರಾಮಯ್ಯ ಬದಾಮಿ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಟೀಕಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದ ರೂಪುರೇಷೆಯನ್ನು ಕುಮಾರಸ್ವಾಮಿ ಅಂತಿಮಗೊಳಿಸಿದ್ದು. ಸಿದ್ದರಾಮಯ್ಯ ಸರ್ಕಾರದ ಕೆಟ್ಟ ಆಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು, ವೀರಶೈವ, ಒಕ್ಕಲಿಗ ಹಾಗೂ ದಲಿತರು ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲಿದ್ದು, ಅಹಿಂದ ವರ್ಗದ ನಾಯಕರಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಕುಮಾರಸ್ವಾಮಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಸೂಕ್ತ ದಾಖಲೆಗಳನ್ನು ತೋರಿಸಲಿ ಎಂದು ದೇವೇಗೌಡರು ಸವಾಲು ಹಾಕಿದರು.