ಪ್ರಿಯಾಂಕ್ ಖರ್ಗೆ-ಶ್ರೀನಿವಾಸ್ ಪೂಜಾರಿ
ಬೆಂಗಳೂರು: ಗದಗದ ವಿದ್ಯಾರ್ಥಿನಿಲಯದ ಅವ್ಯವಸ್ಥೆ ಬಗ್ಗೆ ಟ್ವೀಟ್ ಮಾಡಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿರುವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸತತ ಟ್ವೀಟ್ ಗಳ ಮೂಲಕ ಪ್ರಿಯಾಂಕ ಖರ್ಗೆಯವರು ತಿರುಗೇಟು ನೀಡಿದ್ದಾರೆ.
ಈ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರಿಯಾಂಕ ಖರ್ಗೆ ನಡುವೆ ಟ್ವೀಟ್ ವಾರ್ ನಡೆದಿದೆ.
ಗದಕದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಹಠಾತ್ ಭೇಟಿ ನೀಡಿದ್ದ ಶ್ರೀನಿವಾಸ ಪೂಜಾರಿಯವರು, ಅಲ್ಲಿನ ಅವ್ಯವಸ್ಥೆ ಕಂಡು ಈ ಪುರುಷಾರ್ಥಕ್ಕೆ ಸಚಿವಗಿರಿ ಬೇಕೆ? ರಾಜೀನಾಮೆ ನೀಡಿ ಎಂದು ಖರ್ಗೆಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ ಖರ್ಗೆಯವರು, ರಾಜ್ಯದಲ್ಲಿ 3000 ಸಾವಿರ ವಸತಿ ನಿಲಯ ಇದೆ. ಅವುಗಳ ಸ್ಥಿತಿಯ ಬಗ್ಗೆಯೂ ಅರಿವಿದೆ. ನಿಮ್ಮ ಶಾಸಕರ ನಿಧಿಯಿಂದ ಈವರೆಗೆ ಎಷ್ಟು ಎಸ್'ಟಿ, ಎಸ್'ಸಿ ವಿದ್ಯಾರ್ಥಿನಿಲಯಗಳಿಗೆ ಆನುದಾನ ನೀಡಿ ಸರಿಪಡಿಸಿದ್ದೀರಿ ತಿಳಿಸಿ. ನಿಮಗೆ ಎಸ್'ಟಿ, ಎಸ್'ಸಿ ಬಗ್ಗೆ ಕಾಳಜೆ ಇದ್ದರೆ, ಎಸ್'ಸಿ, ಎಸ್'ಟಿ ವಿರುದ್ಧ ಕಾನೂನುಗಳನ್ನು ತರುತ್ತಿರುವ ಪ್ರಧಾನಿ ಮೋದಿ ರಾಜೀನಾಮೆ ಕೇಳಿ ಎಂದು ಟಾಂಗ್ ನೀಡಿದರು.
ಎಸ್'ಸಿ, ಎಸ್'ಟಿ ಕಾಯಿದೆ ದುರ್ಬಲಗೊಳಿಸಿರುವ ನರೇಂದ್ರ ಮೋದಿ ವಿರುದ್ಧ ಆ.9ಕ್ಕೆ ಭಾರತ್ ಬಂದ್'ಗೆ ದಲಿತರು ಕರೆ ನೀಡಿದ್ದಾರೆ. ಕೋಟ ಅವರೇ ತಾವು ಪ್ರಬುದ್ಧರ. ಈ ಪ್ರಸ್ತಾವನೆ ಹೀಗೆ ಏಕಾಯಿತು ಎಂಬುದನ್ನು ಜನರಿಗೆ ತಿಳಿಸಿ ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಅದನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಪಡಿ. ಇಲ್ಲದಿದ್ದರೆ, ಕೇಂದ್ರ ಸಚಿವರಾದ ಅನಂತ್ ಕುಮಾರ್, ನಿರ್ಮಲಾ ಸೀತಾರಾಮನ್, ಡಿವಿ. ಸದಾನಂದ ಗೌಡರ ರಾಜೀನಾಮೆ ಕೇಳಿ ಎಂದೂ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.