ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಬೀದರ್: ರಾಫೆಲ್ ಯುದ್ಧ ವಿಮಾನ ಒಪ್ಪಂದ ವಿಚಾರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಯುವಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನೆಹರೂ ಕ್ರೀಡಾಂಗಣದಲ್ಲಿ ಜನದನಿ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಫ್ರಾನ್ಸ್ ಗುಪ್ತವಾಗಿ ವ್ಯವಹಾರ ನಡೆಸಿರುವುದರಿಂದ ರಾಫೆಲ್ ಯುದ್ದ ವಿಮಾನದ ದರವನ್ನು ಬಹಿರಂಗಗೊಳಿಸುತ್ತಿಲ್ಲ. ಇದು ಸತ್ಯ ಎಂದು ಹೇಳುತ್ತಿದ್ದರೂ ಫ್ರಾನ್ಸ್ ಅಧ್ಯಕ್ಷರು ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದಿನ ಯುಪಿಎ ಸರ್ಕಾರವು ರಾಫೆ ಯುದ್ದ ವಿಮಾನಗಳನ್ನು ಕರ್ನಾಟಕದ ಹೆಚ್ ಎ ಎಲ್ ನಲ್ಲಿ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಬಿಜೆಪಿ ಆ ಅವಕಾಶವನ್ನು ಕಸಿದುಕೊಂಡಿತು. ಹೀಗಾಗಿ ಕರ್ನಾಟಕದ ಯುವಕರು ನಿರುದ್ಯೋಗಿಗಳಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಯುಪಿಎ ಸರ್ಕಾರವು ಫ್ರಾನ್ಸ್ ನಿಂದ ಪ್ರತಿ ರಾಫೆಲ್ ಯುದ್ದ ವಿಮಾನವನ್ನು ರೂ. 565 ಕೋಟಿಗಳಿಗೆ ಕೊಳ್ಳುವ ಇಂಗಿತ ವ್ಯಕ್ತ ಪಡಿಸಿತ್ತು. ಆದರೆ, ಮೋದಿ ಸರ್ಕಾರ ಈಗ ರೂ. 1,600 ಕೋಟಿಗಳಿಗೆ ಕೊಳ್ಳಲು ಹೊರಟಿದೆ ಎಂದು ದೂರಿದರು.
ನಂತರ ಪ್ರಧಾನಿ ನರೇಂದ್ರಮೋದಿ ಅವರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೇಶದ ಯುವಜನತೆಗೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ ಪ್ರಧಾನಿ ಉದ್ಯೋಗ ಒದಗಿಸುವಲ್ಲಿ ವಿಫಲರಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕೊಳಚೆಗುಂಡಿಯಲ್ಲಿ ಪಾತ್ರೆಯನ್ನು ಬೋರಲು ಹಾಕಿ, ಅನಿಲ ಸಂಗ್ರಹಿಸಿ, ಗ್ಯಾಸ್ ಸ್ಟೌ ಹತ್ತಿಸಿ, ಪಕೋಡ ಮಾಡಿ, ವ್ಯಾಪಾರ ಮಾಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಪ್ರಧಾನಿ ನರೇಂದ್ರಮೋದಿ ಕಾವಲು ಗಾರ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದು ಆರೋಪಿಸಿದ ರಾಹುಲ್ ಗಾಂಧಿ , ತೆರಿಗೆದಾರರು ಕಟ್ಟುವ ಹಣವನ್ನು ಪ್ರಧಾನಿ ಕದಿಯುತ್ತಿದ್ದು, ಅದನ್ನು ಅವರ ಸ್ನೇಹಿತರ ಕಂಪನಿಗಳಿಗೆ ನೀಡುತ್ತಿದ್ದಾರೆ. ಮೋದಿ ದೇಶದ ಪ್ರಧಾನಿ ಅಲ್ಲ 15 ಶ್ರಿಮಂತ ಉದ್ಯಮಿಗಳ ಪ್ರಧಾನಿ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ರೈತರಿಗೆ ಗರಿಷ್ಠ ಬೆಂಬಲ ಬೆಲೆ ನೀಡುವುದಿಲ್ಲ, ಬೆಳೆ ವಿಮೆ ನೀಡುವುದಿಲ್ಲ, ನಿಮ್ಮ ಹೊಲ-ಗದ್ದೆಗಳಲ್ಲಿ ಗುಂಡಿ ತೋಡಿ, ಅಲ್ಲಿ ತ್ಯಾಜ್ಯ ತುಂಬಿ, ಅನಿಲ ಸಂಗ್ರಹಿಸಿ, ಅವುಗಳಿಂದ ನಿಮ್ಮ ಪಂಪ್ ಸೆಟ್ ಗಳನ್ನು ಓಡಿಸಿ, ನೀರು ಹರಿಸಿಕೊಳ್ಳಿ! ಎಂದು ಸಲಹೆ ನೀಡುತ್ತಾರೆ ಎಂದರು.
ಈ ದೇಶದ ಸಂವಿಧಾನ ಉಳಿಯಲು, ಪ್ರಜಾಪ್ರಭುತ್ವ ರಕ್ಷಿಸಲು, ಮತ್ತು ಈ ದೇಶದ ಅಖಂಡತ್ವ ಉಳಿಯಬೇಕಿದ್ದರೆ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics