ಬೆಂಗಳೂರು: ''ಈ ಬಾರಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತೇನೆ'' ಇದು ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದ ಮಾತು. ಅವರು ಹೇಳಿದಂತೆಯೇ ಆಯಿತು,ಯಾವ ಪ್ರಮುಖ ಪಕ್ಷಕ್ಕೆ ಕೂಡ ಸರ್ಕಾರ ರಚನೆ ಮಾಡಲು ಬೇಕಾದಷ್ಟು ಬಹುಮತ ಸಿಗದೇ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಯಿತು, ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡ ಆದರು.
ಹೆಚ್ ಡಿಕೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಮೂರು ತಿಂಗಳುಗಳು ಕಳೆದಿವೆ. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವಾಗ ಎದುರಾಗುವ ಸವಾಲುಗಳು, ಪ್ರತಿಪಕ್ಷಗಳ ಗ್ರಹಿಕೆ, ಟೀಕೆ, ಮುಂದಿನ ಲೋಕಸಭೆ ಚುನಾವಣೆ ಇತ್ಯಾದಿಗಳ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ. ಅಲ್ಲದೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಡ ನಡೆಯಲಿದೆ ಎಂದು ಹೇಳಿದ್ದಾರೆ.
ಇಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಪ್ರಶ್ನೋತ್ತರವಿದೆ.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮೂರು ತಿಂಗಳು ಕಳೆದಿದ್ದೀರಿ, ನಿಮಗೆ ಈಗ ನಾನು ಕಿಂಗ್(ರಾಜ) ಎಂದು ಅನಿಸುತ್ತಿದೆಯಾ?
- ಕಿಂಗ್ ಅನ್ನುವುದಕ್ಕಿಂತ ಹೆಚ್ಚಾಗಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ನನಗೆ ಜನರ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಭಾವಿಸುತ್ತೇನೆ. ಒಂದು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಹಲವು ದೃಷ್ಟಿಕೋನಗಳಲ್ಲಿ ನೋಡಬಹುದು, ಜನರ ಸೇವಕ ಅಥವಾ ರಾಜ್ಯದ ದೊರೆ ಎಂದು ಜನ ಏನು ಬೇಕಾದರೂ ಕರೆಯಬಹುದು, ಅದು ಅವರವರ ನಿರ್ಧಾರಕ್ಕೆ ಬಿಟ್ಟದ್ದು. ನಾನು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ ಎಂದು ಭಾವಿಸುತ್ತೇನೆ, ಅದನ್ನು ರಾಜ್ಯದ ಒಳಿತಿಗಾಗಿ ಬಳಸಿಕೊಳ್ಳುತ್ತೇನೆ. ಅದರೆಡೆಗೆ ಕೆಲಸ ಮಾಡುತ್ತೇನೆ.
ನಿಮ್ಮ ಸರ್ಕಾರದಲ್ಲಿ ನಂಬಿಕೆ ಮತ್ತು ಸಮನ್ವಯತೆ ಸವಾಲೆನಿಸಿದೆಯೇ?
-ಆಡಳಿತದಲ್ಲಿ ಯಾವುದೇ ಸಮಸ್ಯೆಯಿಲ್ಲ. ನನ್ನ ಮೈತ್ರಿ ಪಕ್ಷ ನನಗೆ ಸಂಪೂರ್ಣ ಬೆಂಬಲ ಮತ್ತು ಸಮನ್ವಯತೆ ನೀಡುತ್ತಿದೆ. ಸಚಿವ ಸಂಪುಟ ಯಾರ ಆಕ್ಷೇಪವೂ ಇಲ್ಲದೆ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಸರ್ಕಾರವನ್ನು ನಡೆಸಿಕೊಂಡು ಹೋಗಲು ಯಾವುದೇ ಅಡೆತಡೆಗಳಿಲ್ಲ. ಆದರೆ ಪ್ರಾರಂಭದಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ತೆಗೆದುಕೊಂಡಾಗ ಸಾರ್ವಜನಿಕರ ತೀವ್ರ ಟೀಕೆ ಕೇಳಿಬಂದಿದ್ದರಿಂದ ನನ್ನ ಬಗ್ಗೆ ಜನರಿಗೆ ವಿಶ್ವಾಸ ಮೂಡಲಿಕ್ಕಿಲ್ಲ ಎಂದು ಭಾವಿಸಿ ಬೇಸರಪಟ್ಟುಕೊಂಡಿದ್ದೇನೆ. ಆದರೆ ಪರಿಸ್ಥಿತಿ ಇಂದು ಬದಲಾಗಿದೆ. ಜನ ನನ್ನ ಮೇಲೆ ನಂಬಿಕೆ, ವಿಶ್ವಾಸಗಳನ್ನು ತೋರಿಸಿ ನನ್ನನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸುತ್ತಿದ್ದಾರೆ. ನಾನು ಈ ವಿಷಯದಲ್ಲಿ ಅದೃಷ್ಟ ಎಂದು ಭಾವಿಸುತ್ತೇನೆ. ನನ್ನ ಸಂಪುಟದ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇನೆ. ಸರ್ಕಾರದ ಆಡಳಿತ ವಿಚಾರದಲ್ಲಿ ಯಾವ ಸಚಿವರು ಬೇಕಾದರೂ ನನಗೆ ಸಲಹೆಗಳನ್ನು ನೀಡಬಹುದು.
ನಿಮ್ಮ ಮತ್ತು ಸಿದ್ದರಾಮಯ್ಯ ಮಧ್ಯೆ ಅನೇಕ ಸಲ ಶೀತಲ ಸಮರಗಳು ನಡೆದಿವೆ ಎಂದು ಕೇಳಿದ್ದೇವೆ, ನಿಮ್ಮಿಬ್ಬರ ಮಧ್ಯೆ ಅಷ್ಟೊಂದು ಹೊಂದಾಣಿಕೆ ಇಲ್ಲವೇ?
-ರಾಜ್ಯದ ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ, ಆದರೆ ಅದು ಭಿನ್ನಾಭಿಪ್ರಾಯಗಳಿಂದಲ್ಲ. ಅವರು ಹಿರಿಯರಾಗಿ ನನಗೆ ಆಡಳಿತ ವಿಚಾರದಲ್ಲಿ ಸಲಹೆಗಳನ್ನು ನೀಡಬಹುದು, ಅದನ್ನು ನಾನು ತಪ್ಪು ಭಾವಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ಕದನ, ಕಲಹಗಳಿಲ್ಲ. ನಾವು ಇದುವರೆಗೆ ಎರಡು ಬಾರಿ ಸಮನ್ವಯ ಸಮಿತಿ ಸಭೆ ನಡೆಸಿದ್ದು ಯಾವುದೇ ಭಿನ್ನಾಭಿಪ್ರಾಯಗಳು ಬಂದಿಲ್ಲ.
-ವರ್ಗಾವಣೆ ವಿಚಾರದಲ್ಲಿ ನಿಮ್ಮ ಸಂಪುಟ ಸಹೋದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದವರು ಹೆಚ್ ಡಿ ರೇವಣ್ಣ ಅವರನ್ನು ಸೂಪರ್ ಸಿಎಂ ಎಂದು ಟೀಕಿಸುತ್ತಾರೆ, ಅದು ನಿಮಗೆ ಏನು ಅನಿಸುವುದಿಲ್ಲವೇ?
-ಆಯಾ ಇಲಾಖೆಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳ ಶಿಫಾರಸು ಮೇರೆಗೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ವರ್ಗಾವಣೆ ವಿಚಾರದಲ್ಲಿ ನಾನು ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಸಚಿವರುಗಳು ನೀಡಿದ ಶಿಫಾರಸು ಪತ್ರಗಳ ಆಧಾರದ ಮೇಲೆ ವರ್ಗಾವಣೆ ಮಾಡಿದ್ದೇನೆ. ವೈಯಕ್ತಿಕವಾಗಿ ನಾನು ಯಾವುದೇ ವರ್ಗಾವಣೆ ಮಾಡಿಲ್ಲ. ರೇವಣ್ಣ ಅವರು ತಮ್ಮ ಇಲಾಖೆಯಲ್ಲಿ ಅತ್ಯಂತ ಹುರುಪಿನಿಂದ ಕೆಲಸ ಮಾಡುತ್ತಿರುವುದು ನೋಡಿ ವಿರೋಧ ಪಕ್ಷದವರು ಅವರನ್ನು ಸೂಪರ್ ಸಿಎಂ ಎಂದು ಕರೆಯಬಹುದು. ರಾಜ್ಯಕ್ಕೆ ಒಬ್ಬರೇ ಸಿಎಂ ಇದ್ದು ಆಯಾ ಇಲಾಖೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಅಂತಿಮವಾಗಿ ತೆಗೆದುಕೊಳ್ಳುವುದು ಮುಖ್ಯಮಂತ್ರಿಗಳೇ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಕ್ಷೇತ್ರಗಳಿಂದ ಸ್ಪರ್ಧಿಸುತ್ತದೆ?
ರಾಜ್ಯ ಮಟ್ಟದಲ್ಲಾಗಲಿ ಅಥವಾ ರಾಷ್ಟ್ರ ಮಟ್ಟದಲ್ಲಾಗಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್, ಜೆಡಿಎಸ್ ಮಧ್ಯೆ ಯಾವುದೇ ಚರ್ಚೆ ನಡೆದಿಲ್ಲ. ಅದು ಸೂಕ್ತ ಸಮಯಕ್ಕೆ ನಡೆಯುತ್ತದೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಸೀಟು ಹಂಚಿಕೆ ಮಾಡಲು ಸಾಧ್ಯವಿದೆ. ನಮ್ಮ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕುಳಿತು ನಿರ್ಧರಿಸುತ್ತಾರೆ. ಎರಡೂ ಪಕ್ಷಗಳ ನಾಯಕರು ಅಗತ್ಯ ಇರುವುದನ್ನು ಮಾಡಲು ಮತ್ತು ತ್ಯಾಗಕ್ಕೆ ಸಿದ್ದರಾಗಿರಬೇಕಾಗುತ್ತದೆ.
ಪ್ರತಿಪಕ್ಷಗಳ ಒಕ್ಕೂಟದಲ್ಲಿ ಹೆಚ್ ಡಿ ದೇವೇಗೌಡರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುವುದೇ?
ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವ ಯಾವುದೇ ಉದ್ದೇಶ ಅಥವಾ ಬಯಕೆ ದೇವೇಗೌಡರಿಗಿಲ್ಲ. ಕಾಂಗ್ರೆಸ್ ಜೊತೆ ಎಲ್ಲಾ ಸ್ಥಳೀಯ ಪಕ್ಷಗಳನ್ನು ಒಗ್ಗೂಡಿಸಿ ಒಂದೇ ಸೂರಿನಡಿ ತರುವ ಉದ್ದೇಶ ವಿರೋಧ ಪಕ್ಷಗಳದ್ದಾಗಿದೆ. ನಮ್ಮಲ್ಲಿ ಸಮರ್ಥರಾಗಿರುವ ಹಲವು ಬೇರೆ ಪ್ರಧಾನ ಮಂತ್ರಿ ಅಭ್ಯರ್ಥಿಗಳಿದ್ದಾರೆ. ಯಾವ ಸಮೀಕರಣದ ಮೇಲೆ ಮುಂದಿನ ಚುನಾವಣಾ ಫಲಿತಾಂಶ ಬರಬಹುದು ಎಂದು ನಮಗೆ ಹೇಳಲು ಈಗ ಸಾಧ್ಯವಿಲ್ಲ. ಈ ಹಿಂದೆ ಅವರು ಪ್ರಧಾನಿಯಾಗಿದ್ದರಿಂದ ಮತ್ತು ರಾಜಕೀಯ ಹಿರಿಯ ನಾಯಕರಾಗಿ ದೇವೇಗೌಡರ ಬಗ್ಗೆ ಸಾಕಷ್ಟು ಗೌರವವಿದೆ. ಅದರರ್ಥ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಭಾವಿಸುತ್ತೇವೆ ಎಂದಲ್ಲ. ಜೆಡಿಎಸ್ ಕರ್ನಾಟಕ ಮತ್ತು ಕೇರಳದ ಕೆಲವು ಕಡೆಗಳಲ್ಲಿ ಅಸ್ತಿತ್ವ ಹೊಂದಿದೆ. ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಕೂಡ ನಮಗೆ ಗೊತ್ತಿಲ್ಲ. 5ರಿಂದ 10 ಸಂಸದರನ್ನಿಟ್ಟುಕೊಂಡು ಪ್ರಧಾನ ಮಂತ್ರಿ ಹುದ್ದೆ ಬೇಕೆಂದು ಕೇಳಲು ಸಾಧ್ಯವಿಲ್ಲ. ಎಲ್ಲಾ ನಾಯಕರು ಒಟ್ಟಾಗಿ ಕುಳಿತು ಫಲಿತಾಂಶದ ನಂತರ ಪ್ರಧಾನಿ ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ.
ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹೆಚ್ಚು ಲಾಭ ಪಡೆಯುವುದು ಜೆಡಿಎಸ್ ನಿಲುವೇ?
ನಿಜವಾಗಿ ಹೇಳಬೇಕೆಂದರೆ ಅಲ್ಲ, ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿದರೆ ಹಲವು ಹೊಸ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮೈಸೂರುಗಳಲ್ಲಿ ಜೆಡಿಎಸ್ ಗೆ ಹೆಚ್ಚಿನ ಮತಗಳು ಈ ಬಾರಿ ಬಂದಿವೆ. ಹಾಸನದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ನಮಗೆ ಗೆಲ್ಲುವುದು ಸುಲಭ. ರಾಷ್ಟ್ರ ಮಟ್ಟದಲ್ಲಿ ಮೈತ್ರಿ ನಮಗೆ ಹೊಂದಿಕೆಯಾಗುತ್ತದೆ, ಆದರೆ ನಮ್ಮ ರಾಜ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಸೇರಿಕೊಂಡರೆ ಮಾತ್ರ ನಮಗೆ ಕಷ್ಟವಾಗುತ್ತದೆ. ಎರಡೂ ಪಕ್ಷಗಳಿಗೆ ಅನುಕೂಲ ಮತ್ತು ಅನನುಕೂಲವಿರುತ್ತದೆ. ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.
-ನಿಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನೂ ಪ್ರಯತ್ನಿಸುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ?
ಅದರಲ್ಲಿ ಯಾವ ಸಂಶಯವೂ ಇಲ್ಲ, ಹಲವು ಶಾಸಕರನ್ನು ಸೆಳೆಯಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಆದರೆ ಅವರ ಒತ್ತಡಕ್ಕೆ ನಮ್ಮ ಹಾಗೂ ಕಾಂಗ್ರೆಸ್ ನ ಯಾವ ಶಾಸಕರೂ ಮಣಿದಿಲ್ಲ. ಈ ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣ ಆಡಳಿತ ನಡೆಸುವುದರಲ್ಲಿ ಯಾವ ಅನುಮಾನವೂ ಇಲ್ಲ.
-ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಹೇಗೆ ಸಿದ್ದತೆ ಮಾಡಿಕೊಳ್ಳುತ್ತಿದೆ?
ಪಕ್ಷಕ್ಕಿಂತ ಸ್ಥಳೀಯ ಮಟ್ಟದ ನಾಯಕರು ಮತ್ತು ಅವರ ಕೆಲಸ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಮುಖ್ಯವಾಗುತ್ತದೆ. ಜೆಡಿಎಸ್ ಹೆಚ್ಚು ಪ್ರಭಾವವಾಗಿರುವ ಕ್ಷೇತ್ರಗಳಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ನಾವು ಅಧಿಕಾರ ಪಡೆಯುತ್ತೇವೆ. ಇತ್ತೀಚೆಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನೆಲ್ಲಾ ಸಮಯಗಳನ್ನು ಕೊಡಗು ಮತ್ತು ಬೇರೆ ಕೆಲವು ಜಿಲ್ಲೆಗಳ ವಿಪತ್ತು ನಿರ್ವಹಣಾ ಕೆಲಸಗಳಿಗೆ ಮೀಸಲಿಟ್ಟಿದ್ದೆ. ಹೀಗಾಗಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ನಮ್ಮ ಕಾರ್ಯಕರ್ತರಿಗೆ ಅದನ್ನು ಬಿಟ್ಟಿದ್ದೇನೆ.
ಈ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ನೀವು ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಮತ್ತು ಏನು ಮಾಡುತ್ತೀರಿ?
ನನ್ನ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಸಂಘಟಿತ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ನಿಜವಾಗಿ ಹೇಳಬೇಕೆಂದರೆ ಜನರಿಗೆ ಆ ಭಾವನೆ ಇಲ್ಲ. ಜನರಿಗೆ ನಿಜವಾಗಿಯೂ ಆ ಭಾವನೆ ಇದ್ದರೆ ಅಂದು ಕರೆ ನೀಡಿದ್ದ ಬಂದ್ ಬಹಳ ಯಶಸ್ವಿಯಾಗಬೇಕಿತ್ತು. ಯಾರೂ ಬಂದ್ ಗೆ ಬೆಂಬಲ ನೀಡಲಿಲ್ಲ. ಇದನ್ನು ಕೆಲವರು ವೈಯಕ್ತಿಕವಾಗಿ ಅಪ ಪ್ರಚಾರ ಮಾಡುತ್ತಿದ್ದಾರಷ್ಟೆ. ಅವರು ಅದರಲ್ಲಿ ಯಶಸ್ಸು ಕಾಣುವುದಿಲ್ಲ.