ವಿಜಯಪುರ: ಕಾಂಗ್ರೆಸ್ ನೊಳಗಿನ ಆಂತರಿಕ ಕಲಹ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಮುಜುಗರ ಪರಿಸ್ಥಿತಿಗೆ ಒಡ್ಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರ ಸಂಪೂರ್ಣ 5 ವರ್ಷ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ನಿಂದ ನನ್ನ ನಾಯಕತ್ವದಡಿ ಎದುರಿಸಬೇಕೆಂದು ಹಲವು ನಾಯಕರು ಬಯಸುತ್ತಿದ್ದಾರೆ ಮತ್ತು ಅವರು ನೀವು ಮತ್ತೊಮ್ಮೆ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಇವೆಲ್ಲಾ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಧಕ್ಕೆಯನ್ನುಂಟುಮಾಡುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆ ಬಳಿಕ ನಾನು ಸಿಎಂ ಆಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದೇನೆಯೇ ಹೊರತು ಈ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಲ, ನನ್ನ ಭಾವನೆಗಳನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ವಿರೋಧ ಪಕ್ಷದ ನಾಯಕರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ನಾಯಕರ ಬಗ್ಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗುವ ಹಗಲುಕನಸು ಕಾಣುತ್ತಿದ್ದಾರೆ. ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆಯೇ ಹೊರತು ನಾವು ಅಲ್ಲ, ಬಿಜೆಪಿ ನಾಯಕರು ವದಂತಿಗಳನ್ನು ಹಬ್ಬಿಸುವಲ್ಲಿ ನಿಪುಣರು ಎಂದು ಟೀಕಿಸಿದರು.
ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯನವರು ಏನೂ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಲ್ಲಿ ಮತ್ತು ಅವರ ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಮಾಡಲಿ ಎಂದು ನಾನು ಸವಾಲು ಹಾಕುತ್ತೇನೆ, ಅವರು ಅವರ ಕ್ಷೇತ್ರಕ್ಕೆ ಹೋಗಿದ್ದಾರೋ, ಇಲ್ಲವೋ ಎಂದು ನನಗೆ ಸಂಶಯವಾಗುತ್ತಿದೆ. ಆದರೆ ನಾನು ಬಾದಾಮಿಗೆ ಹಲವು ಬಾರಿ ಹೋಗಿದ್ದೇನೆ. ಬಾದಾಮಿ ಕ್ಷೇತ್ರದ ಜನತೆಯ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು.