ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ಧರ್ಮದ ಬಗ್ಗೆ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದು, ಈಗ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕಳೆದ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಯಾರು ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಅಲ್ಲಿ ಅಲ್ಪಸಂಖ್ಯಾತರ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.
ಮುಸ್ಲಿಂ ಸಮುದಾಯದ ಹೆಸರಾಂತ ವೈದ್ಯ ಮೊಹಮ್ಮದ್ ರೇಲಾ ಎನ್ನುವರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರು ಈ ಹಿಂದೆ 5 ವರ್ಷದ ಮಗುವಿಗೂ ಆಪರೇಷನ್ ಮಾಡಿದ್ದರು. ಇದೀಗ, 111ರ ವಯಸ್ಸಿನ ಶ್ರೀಗಳಿಗೆ ಆಪರೇಷನ್ ಮಾಡಿದ್ದಾರೆ. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿ ಹೇಳುತ್ತಿದ್ದೇನೆ. ಇಂಥ ಆಸ್ಪತ್ರೆಯನ್ನು ನಾನು ಎಲ್ಲೂ ನೋಡಲಿಲ್ಲ. ಈ ಆಸ್ಪತ್ರೆ ತುಂಬಾ ಚೆನ್ನಾಗಿದೆ. ಅಲ್ಲಿನ ವೈದ್ಯರ ಶ್ರೀಗಳಿಗೆ ಸೂಕ್ತ ಚಿಕಿತ್ಸೆ ಕೊಟ್ಟು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿದ್ದರು.
ಡಿಕೆಶಿ ಈ ವಿವಾದಾತ್ಮಕ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ತೀವ್ರವಾದ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳು, ವೈದ್ಯರಿಗೆ, ಶಿಕ್ಷಕರಿಗೆ ಜಾತಿಯೇ ಇಲ್ಲ. ವೈದ್ಯೋ ನಾರಾಯಣೋ ಹರಿ ಎನ್ನುವರು. ಆಸ್ಪತ್ರೆ, ಶಾಲೆಗಳಿಗೆ ಅಲ್ಪಸಂಖ್ಯಾತ ಎನ್ನುವ ವಿಚಾರ ತರಬಾರದು. ಆಸ್ಪತ್ರೆಯಲ್ಲಿ ಎಲ್ಲ ಧರ್ಮದವರೂ ಇರುತ್ತಾರೆ. ಎಲ್ಲರಿಗೂ ಅನಾರೋಗ್ಯ ಉಂಟಾಗುತ್ತದೆ. ಎಲ್ಲ ವೈದ್ಯರೂ ಓದಿರುತ್ತಾರೆ. ಅದನ್ನು ಅರಿತಿದ್ದರೂ ಸಚಿವರು ಈ ರೀತಿ ಹೇಳಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ಧಗಂಗಾ ಮಠದ ಭಕ್ತರು ಡಿಕೆಶಿ ಹೇಳಿಕೆಯನ್ನು ಖಂಡಿಸಿದ್ದು, ಬಿಜೆಪಿ ಮುಖಂಡರು ಸಹ ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಜಾತಿ, ಧರ್ಮ ಏಕೆ? ಗೌರವಾನ್ವಿತ ಸಚಿವರಿಗೆ ಆಸ್ಪತ್ರೆಗೂ ಹೋಗಿ ರಾಜಕೀಯ ಮಾಡೋದು ಗೌರವ ತರುವುದಿಲ್ಲ. ಸ್ವಾಮೀಜಿಗೆ ಯಾರಾದರೂ ರಕ್ತ ಕೊಡುತ್ತಾರೆ ಅಂತಿಟ್ಟುಕೊಳ್ಳಿ. ಅದರಲ್ಲೂ ಧರ್ಮಗಳ ಹೆಸರನ್ನು ತಂದುಬಿಟ್ಟರೆ ಹೇಗೆ? ವೈದ್ಯ ವೃತ್ತಿಗೆ ಧರ್ಮ ಇರಲ್ಲ ದಯವಿಟ್ಟು ಸ್ಥಳದ ಮಹಿಮೆ ಅರಿತು ಮಾತನಾಡಬೇಕು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಹೇಳಿದ್ದಾರೆ.