ರಾಜಕೀಯ

ಬೆಳಗಾವಿ ಅಧಿವೇಶನ: ವಿಪಕ್ಷ ಎದುರಿಸಲು ನಮ್ಮಲ್ಲಿ ಸಮರ್ಥ ನಾಯಕರಿದ್ದಾರೆ: ದಿನೇಶ್ ಗುಂಡೂರಾವ್

Manjula VN
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಎದುರಿಸಲು ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. 
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಬಿಜೆಪಿಯನ್ನು ಎದುರಿಸಲು ನಮಲ್ಲಿ ಸಮರ್ಥ ನಾಯಕರಿದ್ದಾರೆ.  ಉಪ ಚುನಾವಣೆಗಳಲ್ಲೂ ಅಭೂತಪೂರ್ವ ಗೆಲವು ಸಿಕ್ಕಿದೆ. ಪಂಚ ರಾಜ್ಯ ಚುನಾವಣೆಗಳಲ್ಲೂ ಗೆಲುವಿನ ವಿಶ್ವಾಸ ದೊರೆತಿದೆ. ಹಾಗಾಗಿ ಧೈರ್ಯದಿಂದಲೇ ಅಧಿವೇಶನಕ್ಕೆ ಹೋಗುತ್ತೇವೆಂದು ಹೇಳಿದ್ದಾರೆ. 
ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೋಗುತ್ತಿದ್ದಾರೆಂಬ ಮಾತುಗಳಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಸುಳ್ಳು. ಸಿದ್ದರಾಮಯ್ಯ ಅವರು 10 ದಿನಗಳ ಹಿಂದೆಯೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾರೆ, ಡಿ.17ರ ನಂತರ ವಾಪಸ್ ಬಂದು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ. ಡಿ.18ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. 
ಬಿಜೆಪಿಯವರು ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಎಲ್ಲಾ ವರದಿ ಹೋಗುತ್ತದೆ. ಈ ಸಮಿತಿಗೆ ಬಿಜೆಪಿಯ ಆರ್.ಅಶೋಕ್ ಅವರೇ ಅಧ್ಯಕ್ಷರಾಗಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿರುವ ಸಿ.ಟಿ.ರವಿಗೆ ಇದು ಗೊತ್ತಿಲ್ಲವೇ? ಅವರಿಗೆಲ್ಲೋ ಬುದ್ಧಿ ಕಡಿಮೆಯಾಗಿರಬೇಕೆಂದಿದ್ದಾರೆ. 
ಇದೇ ವೇಳೆ ಸಭಾಪತಿ ಸ್ಥಾನದ ಬಿಕ್ಕಟ್ಟು ವಿಚಾರ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಭಾಪತಿ ಚುನಾವಣೆಗೆ ನಾಮಪತ್ರ ಹಾಕಲೇಬೇಕು. ನಾಮಪತ್ರ ಸಲ್ಲಿಸಿದವರು ಮತ್ತೆ ಸಬಾಪತಿಯಾಗಿ ಆಯ್ಕೆಯಾಗುತ್ತಾರೆಂದಿದ್ದಾರೆ. 
SCROLL FOR NEXT