ಬೆಳಗಾವಿ: ರಾಜ್ಯದ ಹಲವೆಡೆ ಭೀಕರ ಬರ ಪರಿಸ್ಥಿತಿ ಎದುರಾಗಿದ್ದರೂ, ಸರ್ಕಾರ ನಿರ್ಲಕ್ಷ ಪ್ರದರ್ಶಿಸುತ್ತಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿದವು.
ಸುವರ್ಣ ವಿಧಾನಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವೇಳೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದ ವಿರುದ್ದ ಕಿಡಿಕಾರಿದರು.
ಕುಮಾರಸ್ವಾಮಿಯವರು ಬರ ಪರಿಸ್ಥಿತಿಯನ್ನು ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಯಡಿಯೂರಪ್ಪ ಅವರು ಬರ ಪರಿಸ್ಥಿತಿ ಎದುರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ಆಗ್ರಹಿಸಿದರು.
ಶೇ.70-80ರಷ್ಟು ಕೃಷಿ ಭೂಮಿಗಳು ಮಳೆಯಿಲ್ಲದೆ ನಾಶ ಹೊಂದಿವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿಲೆ. ಬರ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಯೇ? ಪರಿಸ್ಥಿತಿ ಎದುರಿಸಲು ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಮುಂದಿನ 4-5 ತಿಂಗಳುಗಳಲ್ಲಿ ಪ್ರಸ್ತುತ ಉತ್ತಮ ಮಳೆಯಾಗಿರುವ ಸ್ಥಳದಲ್ಲಿಯೂ ಕೂಡ ಬರ ಪರಿಸ್ಥಿತಿ ಎದುರಾಗಲಿದೆ. ಆದರೂ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಚುನಾವಣೆ ವೇಲೆ ಜೆಡಿಎಸ್ ನೀಡಿದ್ದ ಭರವಸೆಗಳೆಲ್ಲವೂ ಅಪ್ಪಟ ಸುಳ್ಳು, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನವನ್ನು ಜಾರಿಗ ತರಲಾಗುತ್ತದೆ ಎಂದೂ ಕೂಡ ಹೇಳಿದ್ದರು. ಕೃಷಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿ ಮುಖ್ಯಮಂತ್ರಿಗಳು ಈಗಲೂ ಕ್ರಮ ಕೈಗೊಂಡಿಲ್ಲವೇಕೆ? ನಾನು ಅಧಿಕಾರಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕೇವಲ 37 ಸ್ಥಾನ ಪಡೆದವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದವರ ಬಗ್ಗೆ ಕಾಂಗ್ರೆಸ್ ನಾಯಕರು ಶೀಘ್ರದಲ್ಲಿಯೇ ಪಶ್ಚಾತ್ತಾಪ ಪಡುವ ಕಾಲ ಬರಲಿದೆ ಎಂದು ತಿಳಿಸಿದ್ದಾರೆ.