ಬೆಳಗಾವಿ: ಡಿಸೆಂಬರ್ 22ರಂದು ರಾಜ್ಯ ಸಚಿವ ಸಂಪುಟ ಮಾಡುವುದು ಖಚಿತ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ನಡೆಯಲಿದೆ ಮತ್ತು ಅಂದೇ ನಿಗಮ, ಮಂಡಳಿಗೂ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.
ಶಾಸಕಾಂಗ ಸಭೆಯಲ್ಲಿ ನಿಗಮ ಮಂಡಳಿಗಳಿಗೆ ಶಾಸಕರ ಜೊತೆ ವಿಧಾನ ಪರಿಷತ್ ಸದಸ್ಯರನ್ನು ಪರಿಗಣಿಸುವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ 20 ಶಾಸಕರಿಗೆ ಅವಕಾಶ ನೀಡಲಾಗುವುದು. ಎರಡನೇ ಹಂತದಲ್ಲಿ ಪರಿಷತ್ ಸದಸ್ಯರ ಪರಿಗಣಿಸುವ ಕುರಿತು ಯೋಚಿಸಲಾಗುವುದು ಎಂಬ ಭರವಸೆ ನೀಡಿದರು.
ಸಂಪುಟ ವಿಸ್ತರಣೆ ಮತ್ತು ಸಂಪುಟ ಪುನಾರಚನೆ ಎರೂಡ ವಿಷಯಗಳು ಚರ್ಚೆಯಲ್ಲಿವೆ. ಸಾಧ್ಯವಾದರೆ ಎರಡನ್ನೂ ಮಾಡುತ್ತೇವೆ. ಇಲ್ಲವಾದರೆ ಯಾವುದು ಸೂಕ್ತವೋ ಅದನ್ನೇ ಮಾಡುತ್ತೇವೆ ಎಂದರು.
ಡಿಸೆಂಬರ್ 22ರಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಈ ಮಧ್ಯೆ ಸಂಪುಟ ವಿಸ್ತರಣೆ ಮಾತ್ರವಲ್ಲ ಸಂಪುಟ ಪುನಾರಚನೆ ಮಾಡಲಾಗುತ್ತಿದ್ದು, ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಪುಟ ಪುನಾರಚನೆಯ ಕುರಿತು ಡಿಸೆಂಬರ್ 21ರಂದು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಚರ್ಚೆ ನಡೆಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.