ರಾಜಕೀಯ

ಯಡಿಯೂರಪ್ಪ ವಿರುದ್ಧ ಸಿಎಂ ಹೇಳಿಕೆ: ಬಿಜೆಪಿಯಿಂದ ಧರಣಿ, ಕಲಾಪ ಬಲಿ

Manjula VN
ಬೆಳಗಾವಿ: ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕುರಿತು ನೀಡಿರುವನ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ಷಣೆಯಾಚಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದಾಗಿ ಗುರುವಾರ ಇಡೀ ದಿನದ ಕಲಾಪ ಬಲಿಯಾಗುವಂತಾಗಿತ್ತು. 
ಪ್ರತಿಪಕ್ಷದ ಸದಸ್ಯರು ಬುಧವಾರ ಆರಂಭಿಸಿದ್ದ ಧರಣಿ ಗುರುವಾರ ಕೂಡ ಮುಂದುವರೆದಿತ್ತು. ರಾಷ್ಟ್ರೀಕೃತ ಬ್ಯಾಂಕ್ ಗಳ ಜೊತೆಗೂಡಿ ಸಾಲ ಮನ್ನಾಗೆ ಯಡಿಯೂರಪ್ಪ ಅಡ್ಡಿ ಮಾಡುತ್ತಿದ್ದಾರೆಂದು ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಪಟ್ಟು ಹಿಡಿದ ಪರಿಣಾಮ ಸದನದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣ ನಿರ್ಮಾಣಗೊಂಡಿತ್ತು. 
ಎರಡು ಬಾರಿ ಸದನ ಮುಂದೂಡಿ ಸೇರಿದಾಗಲು ಪ್ರತಿಪಕ್ಷ ಸದಸ್ಯರು ಪಟ್ಟು ಸಡಿಲಗೊಳಿಸದ ವಾತಾವರಣ ಕಂಡು ಬಂದ ಹಿನ್ನಲೆಯಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. 
ಬಿಜೆಪಿ ಪಟ್ಟಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿಯವರು, ನಾನೇಕೆ ಕ್ಷಮೆಯಾಚಿಸಬೇಕು. ನಾನು ಯಾವುದೇ ರೀತಿಯ ಅಸಂಸದೀಯ ಹೇಳಿಕೆಯನ್ನು ನೀಡಿಲ್ಲ. ವಿರೋಧ ಪಕ್ಷದ ಹಲವು ಸದಸ್ಯರು ಬರ ಕುರಿತ ಚರ್ಚೆ ವೇಳೆ ಅಸಂಸದೀಯ ಪದಗಳನ್ನು ಬಳಕೆ ಮಾಡಿದ್ದಾರೆ. ಸ್ಪೀಕರ್ ವಿರೋಧ ವ್ಯಕ್ತಪಡಿಸಿದರೆ, ನಾನು ಕ್ಷಮೆಯಾಚಿಸುತ್ತೇನೆಂದು ಹೇಳಿದರು. 
ವಿಧಾನ ಪರಿಷತ್ ಕಲಾಪವೂ ಬಲಿ
ಪ್ರಶ್ನೋತ್ತರ ಸೇರಿದಂತೆ ದಿನದ ಎಲ್ಲಾ ಕಲಾಪವನ್ನು ಬದಿಗೊತ್ತಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ, ನೀರಾವರಿ ಯೋಜನೆ ಮುಂತಾದ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿಯ ಮನವಿ, ಒತ್ತಾಯ, ಧರಣಿಗೆ ಸಭಾಪತಿ ಹಾಗೂ ಸರ್ಕಾರ ಒಪ್ಪದ ಹಿನ್ನಲೆಯಲ್ಲಿ ಗುರುವಾರ ಇಡೀ ದಿನ ಯಾವುದೇ ಕಲಾಪ ನಡೆಯಲಿಲ್ಲ.
ಪ್ರಶ್ನೋತ್ತರ ಮುಗಿದ ನಂತರ ಈ ವಿಷಯದ ಬಗ್ಗೆ ಚರ್ಚಿಸಲು ಸಿದ್ಧ ಎಂದು ಸಭಾನಾಯಕಿ ಜಯಮಾಲ, ಮುಖ್ಯಮಂತ್ರಿ ಕುಮಾರಸ್ವಾಮಿ ಮುಂತಾದವರು ಹೇಳಿದರಾದರೂ ಬಿಜೆಪಿ ಮಾತ್ರ ತನ್ನ ಪಟ್ಟಿ ಸಡಿಲಿಸದೇ ಸಭಾಪತಿಗಳ ಮುಂದೆ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದ ಪರಿಣಾಮ ಸಭಾಪತಿಗಳು ಐದು ಬಾರಿ ಕಲಾಪವನ್ನು ಮುಂದೂಡಿದರು. 
SCROLL FOR NEXT