ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ಸಮಾನತೆಗೆ ವಿರುದ್ಧವಾಗಿರುವವರು ಸಂವಿಧಾನಕ್ಕೂ ವಿರುದ್ಧವೇ ಇರುತ್ತಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕರ್ನಾಟಕ ಅನ್ನ ಭಾಗ್ಯ ಯೋಜನೆ ಹಾಗೂ ಆಹಾರ ಭದ್ರತೆ ಕುರಿತಂದೆ ಟಿಎಂ ಮಹೇಶ್ ಅವರು ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಸಂವಿಧಾನದಲ್ಲಿ ಸಮಾನತೆ ತರುವ ಸಲುವಾಗಿ ಅಗತ್ಯವಿರುವ ಎಲ್ಲಾ ರೀತಿಯ ವೇಗವರ್ಧಕಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸೇರಿಸಿದ್ದಾರೆ. ಸಮಾನತೆಯ ದೃಷ್ಟಿಸಿಂದ ಸರ್ಕಾರ ಎಲ್ಲಾ ನೀತಿಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಸಂವಿಧಾನ ಕುರಿತಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆಗೆ ಪ್ರಧಾನಿ ಮೋದಿಯವರು ಮೌನ ವಹಿಸಿರುವುದನ್ನು ಪ್ರಶ್ನಿಸಿರುವ ಅವರು, ಸಂವಿಧಾನವನ್ನು ಪ್ರಧಾನಿ ಮೋದಿ ಗೌರವಿಸುವುದೇ ಆಗಿದ್ದರೆ, ಅನಂತ್ ಕುಮಾರ್ ಅವರನ್ನು ತಮ್ಮ ಸಂಪುಟದಿಂದ ಕಿತ್ತೊಗೆಯಬೇಕಿತ್ತು ಎಂದು ತಿಳಿಸಿದ್ದಾರೆ.
ಜಾತಿ ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುವ ಅನೇಕ ಸಮಾಜ ಸುಧಾರಕರನ್ನು ನಾವು ಹೊಂದಿದ್ದೇವೆ. ಆದರೂ ಈಗಲೂ ಇದು ಅಸ್ತಿತ್ವದಲ್ಲಿದೆ. ಕ್ರಮ ಹಾಗೂ ನೀತಿಗಳಿಂದಷ್ಟೇ ಇದನ್ನು ತೊಡೆದು ಹಾಕಲು ಸಾಧ್ಯ ಎಂದಿದ್ದಾರೆ.
ಬಳಿಕ ಅನ್ನ ಭಾಗ್ಯ ಯೋಜನೆ ಕುರಿತು ಮಾತನಾಡಿದ ಅವರು, ಯೋಜನೆಯನ್ನು ಜಾರಿಗೆ ತಂದಾಗ ಶಾಸಕರೊಬ್ಬರು ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆಂದು ಹೇಳಿದ್ದರು. ಹಲವು ವರ್ಷಗಳಿಂದ ನೀವು ವಿಶ್ರಾಂತಿ ಪಡೆಯುತ್ತಿದ್ದಿರಿ. ಇದೀಗ ಜನರು ವಿಶ್ರಾಂತಿ ತೆಗೆದುಕೊಳ್ಳಲಿ ಬಿಡಿ ಎಂದು ಅವರಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ.