ರಾಜಕೀಯ

2020ರ ವೇಳೆಗೆ ಸ್ಲಂ ನಿವಾಸಿಗಳಿಗೆ ಮನೆ: ಯಡಿಯೂರಪ್ಪ

Shilpa D
ಬೆಂಗಳೂರು:  ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು. ಬಿಜೆಪಿ ನಾಯಕರು ಕೊಳಗೇರಿ ನಿವಾಸಿಗಳ ಮನೆಯಲ್ಲಿ ವಾಸ್ತವ್ಯ  ಆರಂಭಿಸಿದ್ದಾರೆ.
ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ  ಲಕ್ಷ್ಮಣಪುರಿ ಸ್ಲಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಸ್ತವ್ಯ ಹೂಡಿದ್ದರು. ಆಟೋಚಾಲಕ ಮುನಿರತ್ನ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಯಡಿಯೂರಪ್ಪ,  ಉಪ್ಪಿಟ್ಟು, ಇಡ್ಲಿ, ವಡೆ ಸೇವಿಸಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪ 2020ರ ವೇಳೆಗೆ ಕೊಳಗೇರಿ ನಿವಾಸಿಗಳಿಗೆ ಮನೆ ಒದಗಿಸಿಕೊಡುವುದಾಗಿ ಭರವಸೆ ನೀಡಿದರು,  ಇದೇ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು,   ಕಳೆದ 70 ವರ್ಷಗಳಿಂದ ಕೇವಲ ಮತಗಳಿಗಾಗಿ ಕಾಂಗ್ರೆಸ್ ಕೊಳಗೇರಿ ನಿವಾಸಿಗಳನ್ನು ಬಳಸಿಕೊಳ್ಳುತ್ತಿದೆ, ಸ್ಲಂ ನಿವಾಸಿಗಳ ಜೀವನಮಟ್ಟವನ್ನು ಸುಧಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. 
ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಗಿಮಿಕ್‌ ಮಾಡುತ್ತಿದ್ದಾರೆ. ಈ ಸರಕಾರ ಸ್ಲಂಗಳ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಆದ್ಯತೆ ನೀಡಲಾಗುವುದು. ಸ್ಲಂಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿರುವ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದೆ ಎಂದು ತಿಳಿಸಿದರು. 
ರಾಜ್ಯದಲ್ಲಿ 70ಲಕ್ಷ ನಿವಾಸಿಗಳಿದ್ದು. ಶೇ. 88 ರಷ್ಟು ನಿವಾಸಿಗಳು ಶೌಚಾಲಯಗಳಿಲ್ಲ, ಶೇ,28 ರಷ್ಟು ಮಾತ್ರ ಬೀದಿ ದೀಪ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿ ಪ್ರದೇಶಗಳಿಗೆ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಗಾಂಧಿ ನಗರ ಶಾಸಕರಾಗಲಿ. ಸಿಎಂ ಆಗಲಿ ಇಲ್ಲಿನ ಕೊಳಗೇರಿ ನಿವಾಸಿಗಳನ್ನು ಭೇಟಿ ಮಾಡಿಲ್ಲ ಎಂದು ದೂರಿದರು.
SCROLL FOR NEXT