ಬೆಂಗಳೂರು; ಬಿಜೆಪಿ ಪಕ್ಷದ ಮುಖಂಡ ಕದಿರೇಶ್ ಹತ್ಯೆ ಹಿಂದೆ ಶಾಸಕರೊಬ್ಬರ ಕೈವಾಡವಿದ್ದು, ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಬಿಜೆಪಿ ಮಂಗಳವಾರ ಆಗ್ರಹಿಸಿದೆ.
ಮಂಗಳವಾರ ನಗರದಲ್ಲಿ ಕದಿರೇಶ್ ಹತ್ಯೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿರುವ ಬಿಜೆಪಿ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ಅವರು, ರಾಜ್ಯದಲ್ಲಿ ನಿರಂತರವಾಗಿ ಆರ್'ಎಸ್ಎಸ್, ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಈ ಹತ್ಯೆಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಕೆಲ ಸಚಿವರುಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಕಿಡಿಕಾರಿರುವ ಅವರು, ರಾಜ್ಯದಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ರಾಹುಲ್ ಅವರು ಈ ಬಗ್ಗೆ ಯಾವುದೇ ರೀತಿಯ ಮಾತುಗಳನ್ನು ಆಡಲಿಲ್ಲ. ಬಿಜೆಪಿ ಕಾರ್ಯಕರ್ತ ಹತ್ಯೆ ಕುರಿತಂತೆ ರಾಹುಲ್ ತುಟಿಬಿಚ್ಚಲಿಲ್ಲ ಎಂದು ತಿಳಿಸಿದ್ದಾರೆ.