ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಹೊಗೆ ಕಾಣಿಸಿಕೊಂಡಿದ್ದು, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಕಡೆಗಣಿಸಿದರೆ ಮುಂದಿನ ವಿಧಾನಸಭೆ ಚುನಾವಣೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ರಾಯಣ್ಣ ಬ್ರಿಗೇಡ್ ಗುರುವಾರ ಎಚ್ಚರಿಕೆ ನೀಡಿದೆ.
ಈಶ್ವರಪ್ಪ ಅವರನ್ನು ಕಡೆಗಣಿಸಿದರೆ ನೂರಾಐವತ್ತಲ್ಲ ಐವತ್ತು ದಾಟುವುದಿಲ್ಲ ಎಂದು ರಾಯಣ್ಣ ಬ್ರಿಗೇಡ್ ನಿನ್ನೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿತ್ತು. ಈ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಎಂ ದೊಡ್ಡಯ್ಯ ಅವರು, ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ಕೈತಪ್ಪಿಸುವ ಯತ್ನ ನಡೆದರೆ ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಬಿಳಕಿ ಕೃಷ್ಣಮೂರ್ತಿ ಅವರು, ಈಶ್ವರಪ್ಪ ಅವರಿಗೆ ಟಿಕೆಟ್ ನೀಡಿದರೆ ಠೇವಣಿ ಸಹ ಉಳಿಯುವುದಿಲ್ಲ ಎಂದಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಲು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಈಶ್ವರಪ್ಪ ಅವರು, ನನ್ನ ಜೀವಮಾನದಲ್ಲಿ ಇಂಥ ಮಾತು ಕೇಳಿರಲಿಲ್ಲ. ನನಗೆ ಅವಮಾನ ಆಗಿದೆ. ಇಂಥ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಭಾವೋದ್ವೇಗಕ್ಕೆ ಒಳಗಾಗಿ ಪತ್ರಿಕಾಗೋಷ್ಠಿ ಮೊಟಕುಗೊಳಿಸಿದರು.