ಮೈಸೂರು :ಹಲವು ದಶಕಗಳ ಹಳೆಯದಾದ ಕಾವೇರಿ ನೀರು ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನಿನ್ನೆ ಪ್ರಕಟಿಸಿದ ತೀರ್ಪಿನಲ್ಲಿ ಕರ್ನಾಟಕ ಹೆಚ್ಚುವರಿಯಾಗಿ 14. 75 ಟಿಎಂಸಿ ನೀರನ್ನು ಬಳಸಿಕೊಳ್ಳುವ ಅವಕಾಶ ಸಿಕ್ಕಿದೆ.ಇದು ಚುನಾವಣೆ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಜವಾಗಿಯೇ ಬಲ ತಂದುಕೊಟ್ಟಂತಾಗಿದೆ.
ಮೂರು ವರ್ಷಗಳ ಸತತ ಬರಗಾಲದಿಂದ ನಲುಗಿದ ರಾಜ್ಯಕ್ಕೆ ಕಳೆದ ವರ್ಷ ಸುರಿದ ಭಾರಿ ಮಳೆ ಸಿದ್ದರಾಮಯ್ಯ ಸರ್ಕಾರಕ್ಕೆ ಪುನರ್ ಶ್ಚೇತನ ನೀಡಿತ್ತು. ಬೇಸಿಗೆ ಆರಂಭಕ್ಕೂ ಮುನ್ನವೇ ಕಾವೇರಿ ವಿವಾದ ಬಗೆಹರಿದಿದ್ದು, ಆಡಳಿತಾ ರೂಡ ಪಕ್ಷ ಸ್ವಲ್ಪ ನಿರಾಳವಾದಂತಾಗಿದೆ.
ಕಾವೇರಿ ವಿವಾದ ಸಂಬಂಧ ರಚಿತಗೊಂಡಿದ್ದ ಕಾವೇರಿ ನೀರು ವಿವಾದ ನ್ಯಾಯಾಧೀಕರಣ 2007ರಲ್ಲಿ ನೀಡಿದ ತೀರ್ಪು ಸೇರಿದಂತೆ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪಿನ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭೀತಿ ಶುರುವಾಗಿತ್ತು, ಫಲಿತಾಂಶ ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತಾ ಎಂಬುದು ಸರ್ಕಾರದ ಭಯವಾಗಿತ್ತು.
ಆದರೆ, ಕಾವೇರಿ ತೀರ್ಪು ಭಾಗಶ: ಕರ್ನಾಟಕ ಪರವಾಗಿ ಬಂದಿದ್ದು, ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವಲ್ಲಿ ನೆರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಬೆಂಗಳೂರಿನ ನಗರಕ್ಕೆ ಕುಡಿಯುವ ನೀರಿಗಾಗಿ 14. 75 ಟಿಎಂಸಿ ನೀರನ್ನು ಬಳಸಿಕೊಳ್ಳುವಂತೆ ಕೋರ್ಟ್ ತೀರ್ಪು ನೀಡಿರುವುದು ಕಾವೇರಿ ಅಚ್ಚುಕಟ್ಟು ಪ್ರದೇಶದ ಜನರಲ್ಲಿ ಉತ್ತಮ ಭಾವನೆ ಮೂಡಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕ್ರೇಡಿಟ್ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದೆ.
ಆದರೆ, ಕಾವೇರಿ ಮೇಲ್ವಿಚಾರಣಾ ಸಮಿತಿ ರಚನೆಯಿಂದ ಹಿಂದೆ ಸರಿಯುವಂತೆ ಕೇಂದ್ರಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹೇರುತ್ತಾರೆ ಎಂಬುದನ್ನು ಈ ಭಾಗದ ಜನತೆ ಕಾದು ನೋಡುತ್ತಿದ್ದಾರೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಕಾವೇರಿ ವಿಚಾರವನ್ನು ಆಗಾಗ್ಗೆ ಪ್ರಸ್ತಾಪಿಸುತ್ತಿದ್ದ ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಆಪಾದಿಸುತ್ತಾ ಬಂದಿತ್ತು. ಸುಪ್ರೀಂಕೋರ್ಟ್ ಈಗ ನೀಡಿರುವ ತೀರ್ಪಿನಿಂದ ಕಾಂಗ್ರೆಸ್ ಜೆಡಿಎಸ್ ಗೆ ಪ್ರತ್ಯುತ್ತರ ನೀಡಲು ಸಜ್ಜಾಗಿದೆ.
ಅಲ್ಲದೇ ತಮಿಳುನಾಡು ವಿರೋಧಕ್ಕೆ ಕಾರಣವಾಗಿರುವ ಮೇಕೆದಾಟು ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆಯೂ ಜನರಲ್ಲಿ ಭರವಸೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯವಿದೆ ಎಂದು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜನರಲ್ಲಿ ಬೆಂಬಲ ಮೂಡಿಸುವಲ್ಲಿ ಯಶಸ್ವಿಯಾಗಬಹುದು ಎಂದು ರಾಜಕೀಯ ವಿಮರ್ಶಕ ಹರೀಶ್ ರಾಮಸ್ವಾಮಿ ಹೇಳುತ್ತಾರೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಕಾಂಗ್ರೆಸ್ ವರ್ಚಸ್ಸು ಕೂಡಾ ಹೆಚ್ಚಳವಾಗಿದೆ ಎಂದು ಮತ್ತೊಬ್ಬ ರಾಜಕೀಯ ವಿಮರ್ಶಕ ಮುಜಾಫರ್ ಅಸಾದಿ ಹೇಳುತ್ತಾರೆ.
ಒಟ್ಟಾರೇ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಲ ತಂದುಕೊಡುವಲ್ಲಿ ಯಶಸ್ವಿಯಾಗಿದೆ ಎಂಬುದು ಹಲವರ ಲೆಕ್ಕಾಚಾರವಾಗಿದೆ. ಆದರೆ, ಮತದಾರ ಪ್ರಭು ಏನು ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.