ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಶಾಸಕ ಹ್ಯಾರಿಸ್ ತಮ್ಮ ಪ್ರಭಾವ ಬಳಸಿ ಮಗನ ಹೆಸರು ರೌಡಿಶೀಟರ್ ಲಿಸ್ಟ್ ನಲ್ಲಿ ದಾಖಲಾಗದಂತೆ ಒತ್ತಡ ಹೇರಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಆರೋಪಿಸಿದೆ.
ಹಲ್ಲೆ ಪ್ರಕರಣ ನಡೆದ ನಂತರ ಹ್ಯಾರಿಸ್ ತಮ್ಮ ಮಗನನ್ನು ಮನೆಯಲ್ಲೇ ಇಟ್ಟುಕೊಂಡು 38 ಗಂಟೆಗಳಾದರೂ ಪೊಲೀಸರ ಮುಂದೆ ಹಾಜರುಪಡಿಸದೇ ಇರುವುದೂ ಅಪರಾಧವಾಗಿದ್ದು, ಅಪರಾಧಿಯನ್ನು ಬೆಂಬಲಿಸುವ ಮೂಲಕ ಹ್ಯಾರಿಸ್ ಕೂಡಾ ಅಪರಾಧವೆಸಗಿದ್ದಾರೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಎನ್ಎ ಹ್ಯಾರಿಸ್ ಅವರನ್ನು ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ನಡೆಸಿದ್ದ ಸ್ಯಾಕ್ ಹ್ಯಾರಿಸ್ ಹ್ಯಾಶ್ ಟ್ಯಾಗ್ ಅಭಿಯಾನ ಟ್ರೆಂಡಿಂಗ್ ಟಾಪಿಕ್ ಆಗಿತ್ತು.
ಸಿಎಂ ಗೆ ಕನ್ನಡಿಗರ ಪ್ರಶ್ನೆ ಎಂಬ ಶೀರ್ಷಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ 7 ಪ್ರಶ್ನೆಗಳನ್ನು ಕೇಳಲಾಗಿದ್ದು, ಹ್ಯಾರಿಸ್ ತಮ್ಮ ಪ್ರಭಾವ ಬಳಸಿ ತಡವಾಗಿ ಎಫ್ಐಆರ್ ದಾಖಲಿಸುವಂತೆ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸೆಕ್ಷನ್ 307 ರ ಅಡಿ ಕೊಲೆ ಯತ್ನ ಪ್ರಕರಣ ದಾಖಲಾಗದಂತೆ ಒತ್ತಡ ಹೇರಿರುವುದು ಕಾನೂನಿನ ಉಲ್ಲಂಘನೆಯಲ್ಲವೇ ಎಂದು ಪ್ರಶ್ನೆ ಕೇಳಲಾಗಿದೆ.
ಘಟನೆ ನಡೆದು 38 ಗಂಟೆಗಳಾದರೂ ಮಗನನ್ನು ಪೊಲೀಸರಿಗೆ ಒಪ್ಪಿಸದೇ ಮನೆಯಲ್ಲೇ ಇಟ್ಟುಕೊಂಡಿದ್ದು ಅಪರಾಧಿಯನ್ನು ಬೆಂಬಲಿಸಿರುವುದು, ಹಲ್ಲೆ ನಡೆದ ಪಬ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶ ಮಾಡಿ ಸಾಕ್ಷ್ಯ ಸಿಗದಂತೆ ನೋಡಿಕೊಂಡಿರುವುದು ಅಪರಾಧವಲ್ಲವೇ? ಎಂದು ಪ್ರಶ್ನಿಸಿರುವ ಬಿಜೆಪಿ ಹ್ಯಾರಿಸ್ ಅವರ ಆದೇಶವನ್ನು ಅನುಸರಿಸಿದ ಪೊಲೀಸ್ ಇನ್ಸ್ ಪೆಕ್ಟರ್ ನ್ನು ಅಮಾನತು ಮಾಡಲಾಗಿದೆ. ಆದರೆ ಇಷ್ಟೆಲ್ಲಾ ಮಾಡುವಂತೆ ಆದೇಶ ಕೊಟ್ಟ ಶಾಸಕ ಹ್ಯಾರಿಸ್ ಮಾತ್ರ ಸುರಕ್ಷಿತವಾಗಿದ್ದಾರೆ, ಅವರನ್ನೂ ವಜಾ ಮಾಡಬೇಕು ಎಂದು ಬಿಜೆಪಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಬಿಜೆಪಿ ಸಾಮಾಜಿಕ ಜಾಲತಾಣದ ಅಭಿಯಾನದ ಪ್ರಶ್ನೆಗಳನ್ನು ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಟ್ವೀಟ್ ಮಾಡಿದ್ದಾರೆ.