ಕಾಂಗ್ರೆಸ್ ಗೂಂಡಾರಾಜ್ ಬಗ್ಗೆ ನಿಮ್ಮ ನಿಲುವೇನು: ರಾಹುಲ್ ಗೆ ಶೋಭಾ ಪ್ರಶ್ನೆ?
ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ 1980ರಲ್ಲಿದ್ದ ಕೊತ್ವಾಲ್-ಜಯರಾಜ್ ಯುಗವನ್ನು ನೆನಪಿಸುತ್ತಿದೆ,...
ಬೆಂಗಳೂರು: ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ 1980ರಲ್ಲಿದ್ದ ಕೊತ್ವಾಲ್-ಜಯರಾಜ್ ಯುಗವನ್ನು ನೆನಪಿಸುತ್ತಿದೆ, ಈ ವಿಚಾರವಾಗಿ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಗೂಂಡಾಗಿರಿ ಮತ್ತು ದರ್ಪದ ರಾಜಕೀಯ ಅಂತ್ಯಗೊಳ್ಳುವುದೇ ಅಥವಾ ಮುಂದುವರಿಯುವುದೇ ಎಂಬ ಬಗ್ಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದ ಶೋಭಾ ಕರಂದ್ಲಾಜೆ ಪ್ರಕರಣದ ಕೂಡಲೇ ಆರೋಪಿಯನ್ನು ಬಂಧಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು, ಆದರೆ ಹಾಗೆ ಮಾಡಲಿಲ್ಲ, ಡ್ರಗ್ಸ್ ಮತ್ತಿನಲ್ಲಿದ್ದ ಆರೋಪಿಯನ್ನು 38 ಗಂಟೆಗಳ ನಂತರ ಶರಣಾಗಿಸಲಾಯಿತು. ಮೊಹಮದ್ ನಲಪಾಡ್ ಬಳಿ 7 ಅನಧಿಕೃತ ಗನ್ ಗಳಿವೆ ಈ ಬಗ್ಗೆ ತನಿಖೆ ಏಕೆ ನಡೆದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರ, ಪೊಲೀಸರಿಗೆ ಧಮಕಿ ಹಾಕಿದ ಶಾಸಕ ಹ್ಯಾರಿಸ್ ರಾಜೀನಾಮೆಯನ್ನು ಏಕೆ ಪಡೆದಿಲ್ಲ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಕರಣ ಕುರಿತು ಪೊಲೀಸ್ ಕಮಿಷನರ್ ಜೊತೆ ಸಭೆ ನಡೆಸುವಾಗ ಹ್ಯಾರಿಸ್ ಅವರನ್ನೂ ಪಕ್ಕದಲ್ಲೆ ಕೂರಿಸಿಕೊಳ್ಳುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಪಾಲಿಕೆ ಮಹಿಳಾ ಸದಸ್ಯರ ಮೇಲೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ದಬ್ಬಾಳಿಕೆ ನಡೆಸಿದ್ದರು. ಬೆಂಬಲಕ್ಕೆ ಸರ್ಕಾರ ಇದೆ ಎಂಬ ಕಾರಣಕ್ಕೆ ಶಾಸಕರು ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ತಾವು ವಿಜಯಪುರದಲ್ಲಿ ಸಲೀಸಾಗಿ ಗಾಂಜಾ ಖರೀದಿಸಿದ್ದಾಗಿ ಹೇಳಿದರು.