ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೆ ಸಿಎಂ: ರಾಹುಲ್ ಗಾಂಧಿ ಸುಳಿವು
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಚುನಾವಣೆ ವೇಳೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ರಾಜ್ಯದಲ್ಲಿ....
ಬೆಳಗಾವಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಚುನಾವಣೆ ವೇಳೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚುನಾವಣೆ ನಂತರ ನಾನು ಮತ್ತು ಸಿದ್ದರಾಮಯ್ಯ ಸೇರಿ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಇಂದು ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಜನಾರ್ಶೀವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿ ಪ್ರತಿದಿನ ಒಂದಿಲ್ಲೊಂದು ಹೊಸ ಆಶ್ವಾಸನೆ, ಭರವಸೆ ನೀಡುತ್ತಿದ್ದಾರೆ. ಅವರಿಗೆ ಬಸವಣ್ಣನವರ 'ನುಡಿದಂತೆ ನಡೆ' ವಚನ ಅರ್ಥವಾಗಿಲ್ಲ. ಬಸವಣ್ಣನ ಬಗ್ಗೆ ಮಾತನಾಡುವ ಮೋದಿ ಯಾವತ್ತೂ ನುಡಿದಂತೆ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ಬಳಿ ಹಣ ಹಾಗೂ ಮಾಧ್ಯಮ ಇದೆ. ಆದರೆ ಕಾಂಗ್ರೆಸ್ ಉತ್ತಮ ಆಡಳಿತದಿಂದಲೇ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಪ್ರಧಾನಿ ಮೋದಿ ನನ್ನನ್ನು ಪ್ರಧಾನಿ ಮಾಡಿದರೆ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರುಪಾಯಿ ಹಾಕುತ್ತೀನಿ ಅಂದಿದ್ದರು. ಆದರೆ 10 ರುಪಾಯಿ ಸಹ ಹಾಕಿಲ್ಲ. ನೋಟು ರದ್ದು ಮಾಡಿ ನಿಮ್ಮ ಬಳಿಯಿದ್ದ ಹಣವನ್ನೂ ಬ್ಯಾಂಕಿಗೆ ಹಾಕುವಂತೆ ಮಾಡಿದರು. ಹಿಂದೂಸ್ತಾನದ ಎಲ್ಲ ಕಳ್ಳರು ಮೋದಿ ಆಶೀರ್ವಾದದಿಂದ ತಮ್ಮ ಕಪ್ಪು ಹಣ ಬಿಳಿ ಮಾಡಿಕೊಂಡರು ಎಂದು ಅವರು ರಾಹುಲ್ ವಾಗ್ದಾಳಿ ನಡೆಸಿದರು.