ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ಮುಗ್ಧ ಜನರ ಸಾವಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನರು ಬೆಂಬಲ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ರೂ.76 ಕೋಟಿ ವೆಚ್ಚದಲ್ಲಿ ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ನಗರದಲ್ಲಿ ಕೋಮು ಘರ್ಷಣೆ ಸೃಷಟಿಸಲು ಯತ್ನಗಳು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 1 ಕ್ಷೇತ್ರದಲ್ಲಷ್ಟೇ ಗೆಲವು ಸಾಧಿಸಿತ್ತು. ಮುಂದಿನ ಚುನಾವಣೆಯಲ್ಲಿ ಅದೂ ಕೂಡ ದೊರೆಯುವ ಭರವಸೆಗಳು ಬಿಜೆಪಿಯಲ್ಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಗೋಮು ಘರ್ಷಣೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶವನ್ನು ಹೊಂದಿರುವ ಬಿಜೆಪಿ, ಮುಗ್ಧ ಜನರ ಸಾವಿನಲ್ಲಿ ರಾಜಕೀಯ ಮಾಡುತ್ತಿದೆ. ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಮು ಘರ್ಷಣೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ. ಕೋಮು ಘರ್ಷಣೆ ಸೃಷ್ಟಿಸವವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಅಂತಹ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಎಂತಹದ್ದೇ ಒತ್ತಡಗಳಿಗೂ ಸರ್ಕಾರ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಕೋಮು ಪ್ರತಿನಿಧಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಎರಡು ಸಮುದಾಯಗಳು ಕೋಮು ಘರ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ತಮ್ಮ ಧರ್ಮವನ್ನು ಅನುಸರಿಸಿ ಜೀವನ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಒಬ್ಬರ ಧರ್ಮವನ್ನು ಮತ್ತೊಬ್ಬರು ಗೌರವಿಸಬೇಕು. ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ. ಸಂವಿಧಾನವನ್ನು ಬದಲಿಸುತ್ತೇವೆಂದು ಬಿಜೆಪಿಯವರು ಹೇಳುತ್ತಾರೆ. ಇಂತಹ ನಾಯಕರು ಗ್ರಾಮ ಪಂಚಾಯಿತಿ ಸದಸ್ಯರಾಗಲು ಅರ್ಹರಲ್ಲ ಎಂದು ಕಿಡಿಕಾರಿದ್ದಾರೆ.