ಮುಖ್ಯಮಂತ್ರಿ ಸಿದ್ದರಾಮಯ್ಯ-ಅಮಿತ್ ಶಾ
ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡುವಿನ ವಾಗ್ವಾದ ಕುರಿತು ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತೆ ಕಂಡುಬರುತ್ತಿಲ್ಲ.
ಅಮಿತ್ ಶಾ ಕರ್ನಾಟಕ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿ ಬಿಜೆಪಿ ಮತ್ತು ಆರ್ಎಸ್ಎಸ್ ನವರು ಉಗ್ರವಾದಿಗಳು ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಟೊಮ್ ವಡಕ್ಕನ್, ಸರ್ಕಾರವೊಂದನ್ನು ಹಿಂದೂ ವಿರೋಧಿ ಎಂದು ಕರೆಯುವುದು ಅಮಿತ್ ಶಾ ಅವರಿಗೆ ಸರಿ ಕಾಣಬಹುದು. ಯಾರು ಹಿಂದೂ, ಯಾರು ಮುಸ್ಲಿಂ ಎಂದು ನಮಗೆ ಹೇಳಿಕೊಡಬೇಕಾಗಿಲ್ಲ ಎಂದಿದ್ದಾರೆ.
ಈ ರೀತಿಯ ಹೇಳಿಕೆ ನೀಡುವುದರಿಂದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆಯೇ, ಇಲ್ಲವೇ ಗೊತ್ತಿಲ್ಲ. ಅದನ್ನು ತೀರ್ಮಾನ ಮಾಡುವವರು ಕರ್ನಾಟಕದ ಜನತೆ.
ಸಿದ್ದರಾಮಯ್ಯನವರಾಗಲಿ, ಅಮಿತ್ ಶಾ ಅವರಾಗಲಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರು ಬಹುಶಃ ಗುಪ್ತಚರ ಮಾಹಿತಿಯನ್ನು ಹೊಂದಿರಬಹುದು ಎಂದು ಹೇಳಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂದು ಪಣತೊಟ್ಟಿರುವ ಕೇಸರಿ ಪಕ್ಷ ಮತದಾರರನ್ನು ತನ್ನತ್ತ ಸೆಳೆಯಲು ಇಂತಹ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ನೀಡುತ್ತಿದೆ ಎನ್ನುತ್ತವೆ ಕಾಂಗ್ರೆಸ್ ಒಳಪಾಳಯದವರು.
ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಆಚರಿಸಲು ಮುಂದಾಗಿದೆ ಎಂದು ಕೂಡ ಇತ್ತೀಚೆಗೆ ಬಿಜೆಪಿ ಆರೋಪಿಸಿತ್ತು.
ಹಿಂದುತ್ವದ ಪ್ರತಿರೂಪವಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕರೆತರುವುದು ಕೂಡ ಮತದಾರರನ್ನು ವಿಭಜಿಸುವ ಬಿಜೆಪಿ ಯತ್ನ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics