ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ
ಬೆಂಗಳೂರು: ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಸಾಹಿತಿಗಳು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹೆಗಡೆಯವರ ನಾಲಿಗೆಗೆ ಏನಾಗಿದೆ? ನಾನು ಸಾರಿಗೆ ಸಚಿವನಾಗಿದ್ದು, ನನ್ನ ಭಾಷೆಯಲ್ಲಿ ಹೇಳುವುದಾದರೆ, ಹೆಗಡೆಯವರನ್ನು ರೂಟ್ ನಂ.4ರ ಬಸ್ ಹತ್ತಿಸಬೇಕು ಎಂದು ಹೇಳಿದರು.
ಬಳಿಕ ಮಾಧ್ಯಮದವರು ರೂಟ್ ನಂ.4 ಬಸ್ ಎಂದರೇನು ಎಂಬುದನ್ನು ತಿಳಿಸಿ ಎಂದಾಗ ರೂಟ್ ನಂಬರ್ 4 ಅಂದರೆ, ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಇದರಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರೂ ಕೂಡ ಹೆಗಡೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದು, ಈ ಹಿಂದೆ ಹೇಳಿಕೆ ನೀಡಿದ್ದಾಗ ಹೆಗಡೆಯವರು ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದರು. ಇದೀಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಇಂತಹ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಬಿಜೆಪಿ ನಾಯಕರಿಗೆ ರಾಜ್ಯದ ಜನತೆ ಉತ್ತಮ ಪಾಠವನ್ನು ಕಲಿಸಲಿದ್ದಾರೆಂದು ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಹೆಗಡೆಯಂತಹವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವುದು ದುರಾದೃಷ್ಟಕರ ಸಂಗತಿ ಎಂದಿದ್ದಾರೆ.