ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ಈ ನಡುವೆ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ.
ನಗರದ ಎರಡು ಕ್ಷೇತ್ರಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬುದನ್ನು ಮತದಾರರಿಗೆ ಪರೋಕ್ಷವಾಗಿ ಸೂಚಿಸಿದ್ದಾರೆ.
ಈ ಪೈಕಿ ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ವೇಳೆ ತಮ್ಮ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಹೆಸರನ್ನು ಪರೋಕ್ಷವಾಗಿ ಸೂಚಿಸಿದ್ದರೆ, ಚಾಮರಾಜಪೇಟೆಯಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್'ಗೆ ವಲಸೆ ಬರಲು ಸಿದ್ಧರಾಗಿರುವ ಜಮೀರ್ ಅಹಮದ್'ಗೆ ಟಿಕೆಟ್ ನೀಡುವುದಾಗಿ ಪರೋಕ್ಷವಾಗಿ ಪ್ರಕಟಿಸಿದ್ದಾರೆ.
ಸಿ.ವಿ.ರಾಮನ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಸ್ತವವಾಗಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಹದೇವಪ್ಪ ಅವರ ಹೆಸರು ಅಧಿಕೃತವಾಗಿ ಇರಲಿಲ್ಲ. ಆದರೂ, ಅವರು ಸಮಾರಂಭಕ್ಕೆ ಆಗಮಿಸುವಂತೆ ನೋಡಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಮುಖ್ಯಮಂತ್ರಿಗಳು, ಸಭಿಕರನ್ನು ಉದ್ದೇಶಿಸಿ, ಈ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಯಾರನ್ನು ಗೆಲ್ಲಿಸಬೇಕು ಎಂದು ಪ್ರಶ್ನಿಸಿದರು.
ಪೂರ್ವ ನಿರ್ಧರಿತವೇನೋ ಎಂಬಂತೆ ಸಭಿಕರು ಸಹ ಮಹದೇವಪ್ಪ ಎಂದು ಘೋಷಣೆ ಕೂಗಿದರು. ಈಗ ಸಿದ್ದರಾಮಯ್ಯ ಅವರು, ನಾನು ಇಂದು ಇಲ್ಲಿ ಅಭ್ಯರ್ಥಿ ಹೆಸರುಗಳನ್ನು ಘೋಷಣೆ ಮಾಡಲು ಬಂದಿಲ್ಲ. ಆದರೆ, ನೀವು ಯಾರ ಹೆಸರು ಹೇಳುತ್ತಿದ್ದೀರೋ ಅವರಿಗೇ ಟಿಕೆಟ್ ಎಂದು ಹೇಳುತ್ತಿದ್ದಂತೆಯೇ ಮತ್ತೆ ಮಹದೇವಪ್ಪ ಹೆಸರಿನಲ್ಲಿ ಜಯಘೋಷ ಮೊರೆಯಿತು.
ಚಾಮರಾಜಪೇಟೆಯಲ್ಲಿ ವಾಲ್ಮೀಕಿ ಭವನ ಉದ್ಘಾಟನೆ ಸಮಾರಂಭದ ಭಾಷಣ ಮಧ್ಯದಲ್ಲಿ, ಇನ್ನೂ ಸಾಕಷ್ಟು ಮಾತನಾಡುವುದು ಇದೆ. ಮತ್ತೊಮ್ಮೆ ಜಮೀರ್ ಪರವಾಗಿ ಮತ ಕೇಳಲು ಬಂದಾಗ ಹೆಚ್ಚಿನ ವಿಚಾರಗಳನ್ನು ಮಾತನಾಡುತ್ತೇನೆಂದು ಹೇಳುವ ಮೂಲಕ ಜಮೀರ್ ಅವರ ಟಿಕೆಟ್'ನ್ನು ಖಚಿಸಿತಪಡಿಸಿದರು.
ಸಿದ್ದರಾಮಯ್ಯ ಅವರ ನಡೆಗೆ ಪಿ.ರಮೇಶ್, ಎಂ.ಶ್ರೀನಿವಾಸ್ ಅಸಮಾಧಾನ
ಸಿದ್ದರಾಮಯ್ಯ ಅವರ ಈ ನಡೆಗೆ ಈ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮತ್ತು ಈ ಬಾರಿಯೂ ಟಿಕೆಟ್ ಆಕಾಂಕ್ಷಿಗಳಾಗಿರುವ ಪಿ.ರಮೇಶ್ ಮತ್ತು ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಎಂ. ಶ್ರೀನಿವಾಸ್ ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ರಮೇಶ್ ಅವರು, ಟಿಕೆಟ್ ನೀಡುವ ಕುರಿತು ಅಂತಿಮವಾಗಿ ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಹಲವು ವರ್ಷಗಳ ಕಾಲ ನಾನು ಪಕ್ಷಕ್ಕಾಗಿ ಕಾರ್ಯನಿರ್ವಹಿಸಿದ್ದೇನೆ. ನಾನೂ ಕೂಡ ಸಿ.ವಿ.ರಾಮನ್ ನಗರದ ಟಿಕೆಟ್ ಆಕಾಂಕ್ಷಿ. ಹೈ ಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಕಾಯುತ್ತೇನೆಂದು ಹೇಳಿದ್ದಾರೆ.