ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ , ಈ ಮಾಸಾಂತ್ಯದೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ 25 ಸಾವಿರ ಸ್ವಯಂ ಸೇವಕರನ್ನು ಸೇರ್ಪಡೆಗೊಳಿಸುವ ಆಲೋಚನೆಯಲ್ಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಸೇವಕರಿಗೆ ತರಬೇ ಕಾರ್ಯಕ್ರಮ ಪೂರ್ಣಗೊಳಿಸುವಂತೆ ಪಕ್ಷದ ಮುಖಂಡರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಗಡುವು ನೀಡಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲಿ 100 ಸದಸ್ಯರನ್ನೊಳಗೊಂಡ ತಂಡವೊಂದನ್ನು ರಚಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ 160 ಕಾರ್ಯಗಾರವನ್ನು ಈಗಾಗಲೇ ನಡೆಸಲಾಗಿದೆ. ಉಳಿದಿರುವ 64 ಕಾರ್ಯಗಾರಗಳನ್ನು ಜ. 31ರೊಳಗೆ ಪೂರ್ಣಗೊಳಿಸಲಾಗುವುದು, ಈ ತಿಂಗಳೊಳಗೆ 25 ಸಾವಿರ ಸ್ವಯಂ ಸೇವಕರನ್ನು ಸೇರ್ಪಡೆಗೊಳಿಸಲಾಗುವುದು ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ಬಾಲಾಜಿ ಶ್ರೀನಿವಾಸ್ ತಿಳಿಸಿದ್ದಾರೆ.
ಫೇಸ್ ಬುಕ್, ಟ್ವಿಟರ್, ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಹಾಗೂ ಪಕ್ಷದ ರಾಷ್ಟ್ರ, ರಾಜ್ಯಮಟ್ಟದ ಮುಖಂಡರ ಬಗ್ಗೆ ಒಳ್ಳೆಯ ಅಭಿಪ್ರಾಯ, ಸಂದೇಶ ಹರಡುವಂತೆ ಈ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. ಸಾಮಾಜಿಕ ಜಾಲತಾಣ ನಿರ್ವಹಿಸಲು ರಾಜ್ಯಮಟ್ಟದಲ್ಲಿ 15 ತಂಡಗಳಿವೆ. ಜಿಲ್ಲಾ ಹಾಗೂ ಕ್ಷೇತ್ರ ಮಟ್ಟದಲ್ಲೂ ಇಂತಹ ತಂಡಗಳಿದ್ದು, ಚಿತ್ರ, ವಿಡಿಯೋ ಸಂದೇಶ ಮೂಲಕ ಪಕ್ಷದ ಬಗ್ಗೆ ಒಳ್ಳೆಯ ಪರಿಕಲ್ಪನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳ ದುರಾಡಳಿತದ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ, ಈಗಾಗಲೇ 8 ಸಾವಿರ ವಾಟ್ಸಪ್ ಗುಂಪುಗಳನ್ನು ರಚಿಸಲಾಗಿದೆ, ಈ ಗುಂಪಿನಲ್ಲಿ ಸ್ಥಳೀಯ ಸಮಸ್ಯೆಗಳು ಹಾಗೂ ನಾಯಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.