ಬೆಂಗಳೂರು: ಪಕ್ಷದಲ್ಲಿ ಸ್ವಜನ ಪಕ್ಷಪಾತ ತೋರಿಸದೆ ಉತ್ತಮ ಕೆಲಸ ಮಾಡುವ ಅರ್ಹತೆ ಇರುವ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ನಂತರ ಮಾತನಾಡಿ, ಸಾಮಾನ್ಯವಾಗಿ ರಾಜಕೀಯ ನಾಯಕರ ಜತೆ ಗುರುತಿಸಿಕೊಂಡವರು, ಅವರ ಒಡನಾಟ ಹೊಂದಿರುವವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ, ಪ್ರತಿಭೆ ಹೊಂದಿರುವವರಿಗೆ ಸ್ಥಾನಮಾನ ನೀಡಲಾಗುವುದು ಎಂದರು.
ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಮೇಲೆ ನಂಬಿಕೆಯಿಟ್ಟು ಪಕ್ಷದ ಹೈಕಮಾಂಡ್ ಜವಾಬ್ದಾರಿಯುತ ಸ್ಥಾನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳು ಏನೇನು ಎಂಬುದನ್ನು ಕೂಡ ತಿಳಿಸಿದರು.
ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯದಲ್ಲಿನ ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ತಾಳ್ಮೆಯನ್ನು ತೋರಿಸಬೇಕು ಮತ್ತು ತ್ಯಾಗ ಮಾಡಲು ಸಿದ್ಧರಿರಬೇಕು. ಸಚಿವ ಹುದ್ದೆಗಾಗಿ ಮತ್ತು ನಿಗಮ-ಮಂಡಳಿಗಳಲ್ಲಿ ನೇಮಕಾತಿಗಾಗಿ ಹಲವು ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ವಿಚಾರ ಬಂದಾಗ ಯಾವುದೇ ಸ್ಥಾನಮಾನ, ಅಧಿಕಾರ ಸಿಗಲಿ, ಬಿಡಲಿ ಪಕ್ಷಕ್ಕಾಗಿ ದುಡಿಯಬೇಕು. ಪಕ್ಷಕ್ಕೆ ದ್ರೋಹವೆಸಗುವ ಕೆಲಸ ಮಾಡಿದವರನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮಾತನಾಡಿ, ನೂತನ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು. ನಿನ್ನೆಯ ಕಾರ್ಯಕ್ರಮಕ್ಕೆ ರಾಜ್ಯದ ಹಲವು ಭಾಗಗಳಿಂದ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಈಶ್ವರ ಖಂಡ್ರೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಇನ್ನು ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಡಿ ಕೆ ಶಿವಕುಮಾರ್, ಬಿಕೆ ಹರಿಪ್ರಸಾದ್, ಕೆ ಎಚ್ ಮುನಿಯಪ್ಪ, ಎಂಬಿ ಪಾಟೀಲ್ ಕಾರ್ಯಕ್ರಮದಲ್ಲಿ ಹಾಜರಾಗಿ ಪಕ್ಷದೊಳಗೆ ನಾಯಕರ ಮಧ್ಯೆ ಯಾವುದೇ ಮುನಿಸು ಇಲ್ಲ, ಎಲ್ಲರೂ ಚೆನ್ನಾಗಿದ್ದಾರೆ ಎಂದು ತೋರಿಸಿಕೊಡುವ ಪ್ರಯತ್ನ ಮಾಡಿದರು.
ನಮ್ಮ ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿದ್ದರೂ ಸಹ ಚುನಾವಣೆಯಲ್ಲಿ ಬಿಜೆಪಿಯ ಮತಗಳನ್ನು ಧ್ರುವೀಕರಣ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಮುಂದೆಯಾದರೂ ಬಿಜೆಪಿಯನ್ನು ಸೋಲಿಸಲು ಮತ್ತು ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸುಗಮ ಆಡಳಿತಕ್ಕೆ ಸಹಕಾರ ನೀಡುವುದು ಮತ್ತು ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಯತ್ನಿಸುವುದು ಮತ್ತು ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ನಾಯಕರ ಮಾತಿನಲ್ಲಿ ಹೆಚ್ಚು ಪ್ರಸ್ತಾಪವಾಯಿತು. ಉತ್ತರ ಕರ್ನಾಟಕ ಭಾಗದ ಜನರ ಮತ್ತು ಲಿಂಗಾಯತ ಸಮುದಾಯಗಳಿಗೆ ಆದ್ಯತೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ಈಶ್ವರ ಖಂಡ್ರೆಯವರಿಗೆ ಪಕ್ಷದ ಹೈಕಮಾಂಡ್ ವಹಿಸಿದೆ.