ರಾಜಕೀಯ

ಸಚಿವ ಜಮೀರ್ ಖಾನ್ 'ಅವಸರದ' ಹೇಳಿಕೆ; ಸರ್ಕಾರಕ್ಕೆ ತೀವ್ರ ಮುಜುಗರ

Sumana Upadhyaya

ಬೆಂಗಳೂರು: ವಿಧಾನಪರಿಷತ್ ಕಲಾಪದ ವೇಳೆ ಅಲ್ಪಸಂಖ್ಯಾತ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್, ದಾಖಲೆಯನ್ನು ಸರಿಯಾಗಿ ಪರಿಶೀಲಿಸದೆ ಗೊಂದಲದ ಹೇಳಿಕೆ ನೀಡಿ ಸರ್ಕಾರವನ್ನು ಮುಜುಗರಕ್ಕೀಡುಮಾಡಿದ ಪ್ರಸಂಗ ನಿನ್ನೆ ಎದುರಾಯಿತು.

ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಮತ್ತು ದುರ್ಬಳಕೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರ ವಿರುದ್ಧವೇ ಕೇಳಿಬಂದಿದ್ದ ಆರೋಪ ನಿನ್ನೆ ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದಾಗ ಸಿಬಿಐ ತನಿಖೆಗೆ ಮೊದಲು 'ಆಗಬಹುದು' ಎಂದು ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ್, ಸ್ವಲ್ಪ ಸಮಯದ ಬಳಿಕ 'ನೋಡೋಣ' ಎಂಬ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರು. ಇದರಿಂದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಡತ ಪರಿಶೀಲಿಸಿ ರೂಲಿಂಗ್‌ ನೀಡುವುದಾಗಿ ಪ್ರಕಟಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅರುಣ ಶಹಾಪುರ, ವಕ್ಫ್ ಆಸ್ತಿ ಹಗರಣಕ್ಕೆ ಸಂಬಂಧಿಸಿದ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ವರದಿ ಸಲ್ಲಿಸಿದ ಮೇಲೆ ಒಂದೂವರೆ ವರ್ಷ ನಿಮ್ಮದೇ ಸರ್ಕಾರ ಇತ್ತು. ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದರು.ನಿವ್ಯಾಕೆ ಕ್ರಮ ಕೈಗೊಂಡಿಲ್ಲ. ಬೇಕಿದ್ದರೆ ಸಿಬಿಐಗೆ ವಹಿಸಬೇಕಿತ್ತು ಎಂದು ಸಚಿವ ಜಮೀರ್ ಖಾನ್ ಸವಾಲು ಹಾಕಿದರು.

ಈಗ ನೀವು ಅಧಿಕಾರದಲ್ಲಿದ್ದೀರಲ್ಲಾ ನೀವೇ ಆ ಕೆಲಸ ಮಾಡಿ, ಸಿಬಿಐ ತನಿಖೆಗೆ ನೀವು ಕೊಡ್ತೀರಾ ಎಂದು ಬಿಜೆಪಿ ಸದಸ್ಯರು ಸಚಿವರನ್ನು ಆಗ್ರಹಿಸಿದರು. ಆವೇಶಕ್ಕೊಳಗಾದ ಸಚಿವ ಜಮೀರ್‌ ತನಿಖೆಗೆ ವಹಿಸಲು ಸಿದ್ದ ಎಂದರು. ಸಚಿವರು ಉತ್ತರಿಸಿದ್ದಾರೆ. ಇಲ್ಲಿಗೆ ವಿಷಯ ಮುಗೀತು ಎಂದು ಸಭಾಪತಿ ಬಿಜೆಪಿ ಸದಸ್ಯರನ್ನು ಸುಮ್ಮನಾಗಿಸಿದರು.

ಪರಿಸ್ಥಿತಿಯ ಗಂಭೀರತೆ ಅರಿತು ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಅಬ್ದುಲ್‌ ಜಬ್ಟಾರ್‌ ಈ ವಿಷಯ ಕೋರ್ಟ್‌ನಲ್ಲಿದೆ. ಸಿಬಿಐಗೆ ವಹಿಸಲು ಬರುವುದಿಲ್ಲ ಎಂದರು. ಸಚಿವ ಯು.ಟಿ. ಖಾದರ್‌ ಬೆಂಬಲಕ್ಕೆ ನಿಂತರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಸಚಿವರು ಸಿಬಿಐ ತನಿಖೆಗೆ ನೀಡುವುದಾಗಿ ಹೇಳಿದ್ದಾರೆ. ಮತ್ತೆ ಈ ವಿಚಾರ ಪ್ರಸ್ತಾಪ ಸರಿಯಲ್ಲ ಎಂದು ವಾದಿಸಿದರು.

ಈ ವೇಳೆ ಎದ್ದು ನಿಂತ ಸಚಿವ ಜಮೀರ್‌, "ನಾನು ನೋಡುತ್ತೇನೆ ಎಂದಿದ್ದೇನೆ. ಮಾಡುತ್ತೇನೆ ಎಂದು ಹೇಳಿಲ್ಲ' ಎಂದು ಸಮರ್ಥಿಸಿಕೊಂಡರು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಸದಸ್ಯರು, ಸಚಿವರ ಹೇಳಿಕೆ ಕಡತಕ್ಕೆ ಹೋಗಿದೆ ಎಂದು ಸಭಾಪತಿ ಹೇಳಿದ ಬಳಿಕ ವಿಷಯಕ್ಕೆ ತೆರೆ ಬಿದ್ದಿದೆ. ಈಗ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಚಿವರ ಹೇಳಿಕೆಯ ಕಡತವನ್ನು ತೆಗೆಸಿ ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪಟ್ಟು ಹಿಡಿದರು.

SCROLL FOR NEXT